ಬದಿಯಡ್ಕ: ಕೃಪೇಶ್ ಮತ್ತು ಶರತ್ ಲಾಲ್ ಹತ್ಯೆ ಹಿಂದೆ ಸಿಪಿಎಂ ಮುಖಂಡರ ಕೈವಾಡ ಸಾಬೀತಾಗಿರುವುದಾಗಿ ಕಾಂಗ್ರೆಸ್ ಮುಖಂಡ ಕೆ.ಮುರಳೀಧರನ್ ತಿಳಿಸಿದ್ದಾರೆ. ಅವರು ಸಂಸದೆ ಜೆಬಿ ಮೆತ್ತರ್ ನೇತ್ರತ್ವ ವಹಿಸುತ್ತಿರುವ 'ಮಹಿಳಾ ಸಾಹಸ ಕೇರಳ ಯಾತ್ರೆ'ಗೆ ಬದಿಯಡ್ಕದಲ್ಲಿ ನಡೆದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳನ್ನು ನ್ಯಾಯಾಂಗಬಂಧನದಲ್ಲಿರಿಸಿರುವ ಕೇಂದ್ರ ಕಾರಾಗೃಹಕ್ಕೆ ತೆರಳಿ ಸಿಪಿಎಂ ಮುಖಂಡ ಜಯರಾಜನ್ ಸಾಂತ್ವನ ಹೇಳುವ ಮೂಲಕ ಕೊಲೆಪ್ರಕರಣದ ಜವಾಬ್ದಾರಿಯನ್ನು ತಾನು ವಹಿಸಿಕೊಂಡಿದ್ದಾರೆ. ಟಿಪಿ ಚಂದ್ರಶೇಖರನ್, ಶುಕೂರ್ ಮೊದಲಾದವರ ಕೊಲೆಕೃತ್ಯದ ಅದೇ ನೀಲನಕ್ಷೆ ಪ್ರಕಾರ ಪೆರಿಯ ಅವಳಿ ಕೊಲೆಯನ್ನು ನಡೆಸಲಾಗಿದೆ. ಮಹಿಳೆಯರ ಸ್ವಾಭಿಮಾನ ಮತ್ತು ಘನತೆಯನ್ನು ಕಾಪಾಡುವುದು ಮಹಿಳಾ ಕಾಂಗ್ರೆಸ್ ಆಯೋಜಿಸಿರುವ ಮಹಿಳಾ ಸಾಹಸ ಕೇರಳ ಯಾತ್ರೆಯ ಉದ್ದೇಶವಾಗಿದ್ದು, ಮುಂದೆ ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಯಲ್ಲಿನ ಗೆಲುವಿಗೆ ಯಾತ್ರೆ ಮುನ್ನುಡಿಯಾಗಲಿರುವುದಾಗಿ ತಿಳಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಜಾಥಾ ನಾಯಕಿ ಜೆಬಿ ಮೆತ್ತರ್ ಮೊದಲದವರು ಉಪಸ್ಥಿತರಿದ್ದರು.