ನವದೆಹಲಿ: ಹೊಸ ಔಷಧಗಳ ಹಾಗೂ ಲಸಿಕೆಗಳ ಪರೀಕ್ಷೆಯನ್ನು ಸಾಮಾನ್ಯವಾಗಿ ಬಡ ದೇಶಗಳಲ್ಲಿ ನಡೆಸಲಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ವಿಚಾರವಾಗಿ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳಿಗೆ ಆಕ್ಷೇಪಗಳನ್ನು ಸಲ್ಲಿಸಲು ಅರ್ಜಿದಾರರೊಬ್ಬರಿಗೆ ಅವಕಾಶ ಕಲ್ಪಿಸಿದೆ.
ಹೊಸ ಔಷಧಗಳು ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ ನಿಯಮಗಳನ್ನು 2019ರಲ್ಲಿಯೇ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರ್ಚನಾ ಪಾಠಕ್ ದವೆ ಅವರು ಹೇಳಿದ್ದನ್ನು ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ವಿಭಾಗೀಯ ಪೀಠವು ಪರಿಗಣಿಸಿತು.
ಈ ನಿಯಮಗಳನ್ನು ರೂಪಿಸಿದ ನಂತರ, 2024ರಲ್ಲಿ 'ಹೊಸ ಔಷಧಗಳು ಮತ್ತು ಪರೀಕ್ಷೆಗಳ (ತಿದ್ದುಪಡಿ) ನಿಯಮ'ಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ ಎಂದು ಅರ್ಚನಾ ಅವರು ತಿಳಿಸಿದರು.
ಬಹುರಾಷ್ಟ್ರೀಯ ಔಷಧ ಕಂಪನಿಗಳು ಔಷಧಗಳ ಪರೀಕ್ಷೆಯನ್ನು ದೇಶದಲ್ಲಿ ದೊಡ್ಡ ಮಟ್ಟದಲ್ಲಿ ನಡೆಸುತ್ತಿವೆ ಎಂದು ಆರೋಪಿಸಿ 2012ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿರುವ ಸರ್ಕಾರೇತರ ಸಂಘಟನೆ 'ಸ್ವಾಸ್ಥ್ಯ ಅಧಿಕಾರ ಮಂಚ್' ಪರವಾಗಿ ಹಾಜರಿದ್ದ ಹಿರಿಯ ವಕೀಲ ಸಂಜಯ್ ಪಾರೀಖ್ ಅವರು, ಬಡ ಜನರನ್ನು ಈಗಲೂ ಪ್ರಯೋಗ ಪಶುಗಳನ್ನಾಗಿ ಬಳಸಲಾಗುತ್ತಿದೆ, ಅವರಿಗೆ ಸೂಕ್ತ ಪ್ರಮಾಣದಲ್ಲಿ ಪರಿಹಾರ ಕೊಡುತ್ತಿಲ್ಲ ಎಂದು ದೂರಿದರು.
ನಿಯಮಗಳನ್ನು 2019ರಲ್ಲಿ ರೂಪಿಸಲಾಗಿದೆ, 2024ರಲ್ಲಿ ತಿದ್ದುಪಡಿ ತರಲಾಗಿದೆ. ಹೀಗಾಗಿ ಪಿಐಎಲ್ ಈಗ ಅರ್ಥ ಕಳೆದುಕೊಂಡಿದೆ ಎಂದು ಅರ್ಚನಾ ಅವರು ಹೇಳಿದರು. ನಿಯಮಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಪಾರೀಖ್ ಅವರಿಗೆ ಪೀಠವು ನಾಲ್ಕು ವಾರ ಸಮಯಾವಕಾಶ ನೀಡಿದೆ.