ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಎಪಿ ಅಧಿಕಾರದಲ್ಲಿದ್ದಾಗಲೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ತಡೆಯಲಾಗಲಿಲ್ಲ ಎಂದು ಜರಿದಿರುವ ಕಾಂಗ್ರೆಸ್ ಖಜಾಂಚಿ ಅಜಯ್ ಮಾಕನ್, ಎಎಪಿಯ ಬೆಳವಣಿಗೆಯಿಂದ ಕೇಸರಿ ಪಾಳಯಕ್ಕೆ ಮಾತ್ರ ಪ್ರಯೋಜನ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನ ನೂತನ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
'ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನು ದೇಶ ವಿರೋಧಿ ಎಂದು ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಆದರೆ ಇದು ನನ್ನ ವೈಯಕ್ತಿಕ ಅಭಿಪ್ರಾಯವಷ್ಟೇ' ಎಂದು ಅವರು ಪ್ರತಿಕ್ರಿಯಿಸಿದರು.
'ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಅಲ್ಲಿನ ಏಳೂ ಲೋಕಸಭಾ ಕ್ಷೇತ್ರಗಳಲ್ಲಿ ನಾವು ಜಯಿಸಿದ್ದೆವು. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಬೆಳವಣಿಗೆಗೆ ತಡೆಯೊಡ್ಡಿದ್ದೆವು. ಆದರೆ ಎಎಪಿ ಅವಧಿಯಲ್ಲಿ ಅದು ಉಲ್ಟಾ ಆಗಿದೆ' ಎಂದು ಅವರು ಆರೋಪಿಸಿದರು.
ದೆಹಲಿಯಲ್ಲಿ ಕಾಂಗ್ರೆಸ್ ಅನ್ನು ದುರ್ಬಲಗೊಳಿಸುವ ಮೂಲಕ ಬಿಜೆಪಿಯನ್ನು ಎದುರಿಸಬಹುದು ಎಂದು ಯಾರಾದರೂ ಅಂದುಕೊಂಡಿದ್ದರೆ ಅದು ಸರಿಯಲ್ಲ ಎಂದು ಅವರು ಹೇಳಿದರು.
ದೆಹಲಿ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ ಎಎಪಿಯನ್ನು ಕಾಂಗ್ರೆಸ್ ಬೆಂಬಲಿಸುತ್ತದೆಯೇ ಎಂಬ ಪ್ರಶ್ನೆಗೆ, 'ಕೇಜ್ರಿವಾಲ್ ಬೆಳೆದರೆ, ಅದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ. ಬಿಜೆಪಿಯನ್ನು ಸೋಲಿಸಲು ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅನ್ನು ಬಲಿಷ್ಠಗೊಳಿಸಬೇಕಾದ ಅನಿವಾರ್ಯತೆಯಿದೆ. ರಾಜಧಾನಿಯಲ್ಲಿ ನಮ್ಮ ಸಂಘಟನೆ ದುರ್ಬಲವಾಗಿದ್ದರೆ, ಬಿಜೆಪಿಯನ್ನು ಕಟ್ಟಿಹಾಕುವುದು ಅಸಾಧ್ಯ' ಎಂದರು.
'2013ರಲ್ಲಿ ಕೇಜ್ರಿವಾಲ್ ಅವರ 49 ದಿನಗಳ ಸರ್ಕಾರಕ್ಕೆ ಬೆಂಬಲ ನೀಡಿದ್ದರಿಂದ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಎಎಪಿ ಜತೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ತೊಂದರೆ ಅನುಭವಿಸಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಅವರು ತಿಳಿಸಿದರು.
ಕೇಜ್ರಿವಾಲ್ ಅವರು ಜೈಲಿನಿಂದ ಹೊರಬಂದ ಮರು ದಿನವೇ ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಎಎಪಿ ಸ್ಪರ್ಧಿಸಲಿದೆ ಎಂದು ಏಕಪಕ್ಷೀಯವಾಗಿ ಘೋಷಿಸಿದ್ದರು. ಅದೂ ಸೀಟು ಹಂಚಿಕೆ ಕುರಿತ ಮಾತುಕತೆ ಅಂತಿಮ ಹಂತದಲ್ಲಿದ್ದಾಗ ಈ ರೀತಿ ನಡೆದುಕೊಂಡಿದ್ದರು. ಅದೇ ರೀತಿ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ದಿನ ಬಳಿಕ ಎಎಪಿಯು ದೆಹಲಿ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ದಿಸುವುದಾಗಿ ಘೋಷಿಸಿತ್ತು ಎಂದು ಮಾಕನ್ ನೆನಪು ಮಾಡಿಕೊಂಡರು.