ಇಂಫಾಲ: ಕಳೆದ ಎರಡು ದಿನಗಳಲ್ಲಿ ಮಣಿಪುರದ ಹಲವು ಭಾಗಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ನಿಷೇಧಿತ ಸಂಘಟನೆಗಳಿಗೆ ಸೇರಿದ ಏಳು ಜನರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ನಡೆಸಲಾದ ಕಾರ್ಯಾಚರಣೆಯಲ್ಲಿ ಕಾನೂನುಬಾಹಿರ ಕಂಗ್ಲೀ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್)ನ ಮೂವರು ಸದಸ್ಯರು ಮತ್ತು ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್-ಕೊಯಿರೆಂಗ್ (ಯುಎನ್‌ಎಲ್‌ಎಫ್-ಕೆ)ನ ಒಬ್ಬ ಸಕ್ರಿಯ ಕಾರ್ಯಕರ್ತನನ್ನು ಭಾರತ-ಮ್ಯಾನ್ಮಾರ್ ಗಡಿ ಪ್ರದೇಶದ ತೆಂಗನೌಪಾಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂಫಾಲ್‌ನ ಪಾವೊನಾ ಬಜಾರ್ ಪ್ರದೇಶದಲ್ಲಿ ಬುಧವಾರ ನಡೆಸಿದ ಕಾರ್ಯಾಚರಣೆಯಲ್ಲಿ ಸುಲಿಗೆ ಚಟುವಟಿಕೆಗಳಲ್ಲಿ ತೊಡಗಿದ್ದ ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿಯ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತೌಬಲ್ ಜಿಲ್ಲೆಯ ತೆಂತಾ ಪ್ರದೇಶದಿಂದ ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್‌ನ ಇಬ್ಬರು ಸಕ್ರಿಯ ಸದಸ್ಯರನ್ನು ಭದ್ರತಾ ಪಡೆಗಳು ಬುಧವಾರ ಬಂಧಿಸಿವೆ ಎಂದು ಹೇಳಿಕೆ ತಿಳಿಸಿದೆ.