ಬೀಜಿಂಗ್: ಚೀನಾದಲ್ಲಿ ಕೋವಿಡ್-19 ಹೋಲುವ ಊಒP ವೈರಾಣು ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಜನರು ತುಂಬಿ ತುಳುಕುತ್ತಿದ್ದಾರೆ ಎನ್ನುವ ವರದಿಗಳನ್ನು ಚೀನಾ ಸರ್ಕಾರ ಅಲ್ಲಗಳೆದಿದ್ದು, ಚಳಿಗಾಲದಲ್ಲಿ ಉಸಿರಾಟ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳುವುದು ಸಹಜ ಎಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿಗಾಲದಲ್ಲಿ ಉಸಿರಾಟ ಸಂಬಂಧಿ ಕಾಯಿಲೆಯ ಪ್ರಕರಣಗಳ ಸಂಖ್ಯೆ ಕಡಿಮೆಯಿದೆ. ಹೀಗಾಗಿ ವಿದೇಶಿಗರು ಚೀನಾಕ್ಕೆ ಬರಲು ಸುರಕ್ಷಿತವಾಗಿದೆ ವಿದೇಶಾಂಗ ಸಚಿವಾಲಯ ಹೇಳಿದೆ.
'ಚಳಿಗಾಲದಲ್ಲಿ ಚೀನಾದ ಉತ್ತರ ಭಾಗದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕು ಹರಡುವುದು ಹೆಚ್ಚು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸೋಂಕು ಹರಡುತ್ತಿರುವ ಪ್ರಮಾಣ ಮತ್ತು ಅದರ ತೀವ್ರತೆಯೂ ಕಡಿಮೆಯಿದೆ. ಚೀನಾದ ಜನತೆ ಮತ್ತು ವಿದೇಶಿಗರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿವಹಿಸಲಿದೆ ಎಂದು ಭರವಸೆ ನೀಡುತ್ತೇನೆ. ವಿದೇಶಿಗರು ಸುರಕ್ಷಿತವಾಗಿ ಚೀನಾಕ್ಕೆ ಪ್ರಯಾಣ ಮಾಡಬಹುದು' ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾಹೋ ನಿಂಗ್ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದ್ದಾರೆ.
ಇದೇ ವೇಳೆ, ಚಳಿಗಾಲದಲ್ಲಿ ಹರಡುವ ಉಸಿರಾಟ ಸಂಬಂಧಿ ಸೋಂಕುಗಳನ್ನು ತಡೆಗಟ್ಟಲು ರಾಷ್ಟ್ರೀಯ ರೋಗ ನಿಯಂತ್ರಣ ಮತ್ತು ತಡೆ ಸಂಸ್ಥೆ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳ ಬಗ್ಗೆಯೂ ನಿಂಗ್ ವಿವರಿಸಿದ್ದಾರೆ.
'ಕಳೆದ ಕೆಲವು ದಿನಗಳಿಂದ ಚೀನಾದಲ್ಲಿ ವೈರಾಣು ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಆಸ್ಪತ್ರೆಗಳು ಭರ್ತಿಯಾಗಿವೆ ಎನ್ನುವ ವಿಡಿಯೊ, ಸುದ್ದಿಗಳು ವಿದೇಶಗಳಲ್ಲಿ ಹರಿದಾಡುತ್ತಿವೆ. ಮುಖ್ಯವಾಗಿ ಭಾರತ ಮತ್ತು ಇಂಡೊನೇಷ್ಯಾದಲ್ಲಿ ಈ ಸುದ್ದಿ ಹೆಚ್ಚು ಹರಡಿದೆ. ಚೀನಾದಲ್ಲಿ ಈಗ ತೀವ್ರತರ ಚಳಿಗಾಲವಿರುವ ಕಾರಣ ಉಸಿರಾಟ ಸಂಬಂಧಿ ಸಮಸ್ಯೆಗಳು ಸಾಮಾನ್ಯ' ಎಂದು ನಿಂಗ್ ತಿಳಿಸಿರುವುದಾಗಿ ವರದಿಯಾಗಿದೆ.