ತಿರುವನಂತಪುರಂ: ಕೇರಳದ ತ್ಯಾಜ್ಯವನ್ನು ತಮಿಳುನಾಡಿನಲ್ಲಿ ಸುರಿಯಲು ಯಾರಾದರೂ ಪ್ರಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕನ್ಯಾಕುಮಾರಿ ಎಸ್ಪಿ ಹೇಳಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಹೋಟೆಲ್ ತ್ಯಾಜ್ಯ ಸಾಗಿಸುತ್ತಿದ್ದ ಲಾರಿಯಲ್ಲಿ ನಾಲ್ವರು ಮಲಯಾಳಿಗಳು ಸೇರಿದಂತೆ 9 ಜನರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಈಗ ತಿರುನಲ್ವೇಲಿಯ ಬದಲು ಕನ್ಯಾಕುಮಾರಿಯಲ್ಲಿ ಕಸ ಸುರಿಯುವ ಪ್ರಯತ್ನ ನಡೆಯುತ್ತಿದೆ ಎಂದು ಎಸ್ಪಿ ಆರ್. ಸ್ಟಾಲಿನ್ ದೂಷಿಸಿದರು. ಕಸದ ಲಾರಿಗಳನ್ನು ಹಿಡಿಯಲು ಪ್ರತ್ಯೇಕವಾಗಿ ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ಕಸ ಸಾಗಿಸುವ ವಾಹನಗಳ ಮಾಲೀಕರು ಮತ್ತು ಸಿಬ್ಬಂಧಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಎಸ್ಪಿ ಘೋಷಿಸಿದ್ದಾರೆ.
ಈ ಮಧ್ಯೆ, ಕೇರಳದಿಂದ ಬರುವ ಕಸದ ಲಾರಿಗಳ ಸಮಸ್ಯೆಯನ್ನು ತಮಿಳುನಾಡು ಮತ್ತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಎತ್ತಲಿದೆ ಎಂದು ವರದಿಯಾಗಿದೆ. ಈ ಪ್ರಕರಣದ ವಿಚಾರಣೆ ಈ ತಿಂಗಳ 20 ರಂದು ನಡೆಯಲಿದೆ.