ತಿರುವನಂತಪುರಂ: ರಾಜ್ಯ ಶಾಲಾ ಕಲೋತ್ಸವ ನಿನ್ನೆ ಸಮಾರೋಪಗೊಂಡಿದ್ದು, ಸ್ಪರ್ಧೆಯಲ್ಲಿ ತ್ರಿಶೂರ್ ಜಿಲ್ಲೆ 1008 ಅಂಕ ಗಳಿಸಿ ಚಿನ್ನದ ಕಪ್ ತನ್ನದಾಗಿಸಿಕೊಂಡಿತು.
ತ್ರಿಶೂರ್ ಜಿಲ್ಲೆ ಕಾಲು ಶತಮಾನದ ನಂತರ ಈ ಸಾಧನೆ ಮಾಡುತ್ತಿದೆ. ತ್ರಿಶೂರ್ ಕೊನೆಯ ಬಾರಿಗೆ 1999ರ ಕೊಲ್ಲಂನಲ್ಲಿ ನಡೆದಿದ್ದ ಕಲೋತ್ಸವದಲ್ಲಿ ಚಿನ್ನದ ಕಪ್ ಗೆದ್ದುಕೊಂಡಿತ್ತು.
ತ್ರಿಶೂರ್ ಮತ್ತು ಪಾಲಕ್ಕಾಡ್ ನಡುವೆ ನಿಕಟ ಹೋರಾಟ ನಡೆಯಿತು. ಅಂತಿಮವಾಗಿ, ಎಲ್ಲಾ ಸ್ಪರ್ಧೆಗಳು ಅಧಿಕೃತವಾಗಿ ಮುಕ್ತಾಯಗೊಂಡಾಗ ತ್ರಿಶೂರ್ ಕೇವಲ ಒಂದು ಅಂಕದ ಅಂತರದಲ್ಲಿ ರಜತ ಕಪ್ ಗೆದ್ದುಕೊಂಡಿತು. ಪಾಲಕ್ಕಾಡ್ 1007 ಅಂಕ ಗಳಿಸಿದೆ. ಪ್ರೌಢಶಾಲಾ ವಿಭಾಗದಲ್ಲಿ ಉಭಯ ತಂಡಗಳು 482 ಅಂಕಗಳೊಂದಿಗೆ ಸಮಬಲ ಸಾಧಿಸಿವೆ. ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳು ತ್ರಿಶೂರ್ ನ ರಕ್ಷಣೆಗೆ ಬಂದರು. ಹೈಯರ್ ಸೆಕೆಂಡರಿಯಲ್ಲಿ ತ್ರಿಶೂರ್ 526 ಅಂಕ ಹಾಗೂ ಪಾಲಕ್ಕಾಡ್ 525 ಅಂಕ ಪಡೆದಿವೆ.
ಕಳೆದ ವರ್ಷದ ವಿಜೇತ ಕಣ್ಣೂರು ತಂಡ 1003 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. 21 ವರ್ಷಗಳಿಂದ ಪ್ರಶಸ್ತಿಯ ಏಕಸ್ವಾಮ್ಯವನ್ನು ಹೊಂದಿರುವ ಕೋಝಿಕ್ಕೋಡ್ ನಾಲ್ಕನೇ ಸ್ಥಾನಕ್ಕೆ ಈ ಬಾರಿ ತೃಪ್ತಿಪಡಬೇಕಾಯಿತು. 1000 ಅಂಕ ಲಭಿಸಿದೆ. ಶಾಲೆಗಳ ವಿಭಾಗದಲ್ಲಿ ಪಾಲಕ್ಕಾಡ್ ಆಲತ್ತೂರ್ ಬಿ.ಎಸ್. ಜಿ.ಗುರುಕುಲಂ ಹೈಯರ್ ಸೆಕೆಂಡರಿ ಶಾಲೆ ಪ್ರಥಮ ಪಡೆದುಕೊಂಡಿದೆ. ತಿರುವನಂತಪುರಂ ಕಾರ್ಮೆಲ್ ಹೈಯರ್ ಸೆಕೆಂಡರಿ ದ್ವಿತೀಯ, ಇಡುಕ್ಕಿ ಎಂ.ಕೆ. ಎನ್‍ಎಂಎಚ್‍ಎಸ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡಿದೆ.