ಕಾಸರಗೋಡು: ನಗರದ ಅತ್ಯಂತ ಶಿಥಿಲಾವಸ್ಥೆಯಲ್ಲಿರುವ ಕಾಸರಗೋಡು-ಮಧೂರು ರಸ್ತೆಯ ಕೂಡ್ಲು, ಮೀಪುಗುರಿ ಪ್ರದೇಶದಲ್ಲಿ ಕೊನೆಗೂ ಲೋಕೋಪಯೋಗಿ ಇಲಾಖೆ ಹೊಂಡ ಮುಚ್ಚುವ ಕಾಮಗಾರಿಗೆ ಚಾಲನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ಕರಂದಕ್ಕಾಡಿನಿಂದ ಮಧೂರು ಕ್ಷೇತ್ರಕ್ಕೆ ಸುಮಾರು ಆರು ಕಿ.ಮೀ ದೂರವಿದ್ದು, ಸೂರ್ಲು, ಚೂರಿ, ರಾಮದಾಸನಗರ ಮುಂತಾದೆಡೆ ರಸ್ತೆ ಸಂಪೂರ್ಣ ಹೊಂಡಬಿದ್ದಿರುವುದಲ್ಲದೆ, ಕೆಲವೆಡೆ ರಸ್ತೆ ಇಕ್ಕಟ್ಟಿನಿಂದ ಕೂಡಿರುವ ಬಗ್ಗೆ 'ವಿಜಯವಾಣಿ' ವಿಶೇಷ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಗಮನ ಸೆಳೆದಿತ್ತು.
ಬೃಹತ್ ಹೊಂಡಗಳನ್ನು ಮಾತ್ರ ಮುಚ್ಚುವ ಮೂಲಕ ತಾತ್ಕಾಲಿಕ ದುರಸ್ತಿಕಾರ್ಯ ನಡೆಯುತ್ತಿದ್ದು, ಉಳಿದಂತೆ ರಸ್ತೆಯ ಶಿಥಿಲಾವಸ್ಥೆ ಪರಿಹರಿಸಲು ಇಲಾಖೆ ಮುಂದಾಗಿಲ್ಲ. ಒಂದೆಡೆ ಇಕ್ಕಟ್ಟಾದ ರಸ್ತೆ, ಕಡಿದಾದ ತಿರುವುಗಳಲ್ಲಿ ರಸ್ತೆ ಅಂಚಿಗಿರುವ ವಿದ್ಯುತ್ ಕಂಬಗಳು, ಜತೆಗೆ ರಸ್ತೆಯಲ್ಲಿ ಉಂಟಾಗಿರುವ ಹೊಂಡಗಳಿಂದ ದಕ್ಷಿಣ ಕೇರಳದ ಪ್ರಸಿದ್ಧ ಧಾರ್ಮಿಕ ಕೇಂದ್ರವೊಂದಕ್ಕೆ ತೆರಳುವ ಹಾದಿ ಅತ್ಯಂತ ಶೋಚನೀಯಾವಸ್ಥೆಯಲ್ಲಿದೆ.
ರಸ್ತೆ ಅಭಿವೃದ್ಧಿಗೆ ಆಗ್ರಹ:
ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆ ಮಾ 27ರಿಂದ ಏ. 7ರ ವರೆಗೆ ನಡೆಯಲಿದ್ದು ಈ ಮಹೋತ್ಸವಕ್ಕೂ ಮೊದಲು ರಸ್ತೆ ಅಭಿವೃದ್ಧಿಕಾರ್ಯವನ್ನು ಸಮಗ್ರವಾಗಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸುತ್ತಾ ಬಂದಿದ್ದರೂ, ದೊಡ್ಡ ಹೊಂಡ ಮುಚ್ಚುವ ಮೂಲಕ ತೇಪೆಹಚ್ಚುವ ಕೆಲಸ ಮಾತ್ರ ನಡೆಯುತ್ತಿದೆ. ಹಲವು ವರ್ಷಗಳ ನಂತರ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ದೇವಾಲಯಕ್ಕೆ ಬಂದು ಸೇರುವ ನಿರೀಕ್ಷೆಯಿದ್ದು, ದೇವಾಲಯಕ್ಕೆ ಸಂಚರಿಸುವ ಲೋಕೋಪಯೋಗಿ ಇಲಾಖೆಯ ಈ ರಸ್ತೆಯ ಶೋಚನೀಯಾವಸ್ಥೆ ಸರ್ಕಾರದ ವ್ಯವಸ್ಥೆಯನ್ನು ಅಣಕಿಸುವಂತಿದೆ. ಭಕ್ತಾದಿಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯಿಂದ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.