ಕಾಸರಗೋಡು : ಬೆಂಗಳೂರಿನಿಂದ ಕುಂಬಳೆಗೆ ಪ್ರವಾಸ ಆಗಮಿಸಿದ್ದ ಯುವಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೆಂಗಳೂರು ಜಯನಗರ ನಿವಾಸಿ, ಮೀರ್‍ಮಹಮ್ಮದ್ ಶಾಫಿ(33)ಮೃತಪಟ್ಟವರು. ಸೋಮವಾರ ಮೊಗ್ರಾಲ್ ಕಡಪ್ಪುರದಲ್ಲಿ ದುರಂತ ಸಂಭವಿಸಿದೆ. ವಿಪರ್ಯಾಸವೆಂದರೆ, ನೀರಿಗೆ ಬಿದ್ದ ತನ್ನ ಮಗುವನ್ನು ರಕ್ಷಿಸಿ ದಡ ಸೇರಿಸಿದ ತಕ್ಷಣ ಮೀರ್‍ಮಹಮ್ಮದ್ ಅವರನ್ನು ಬೃಹತ್ ಅಲೆ ಸಮುದ್ರಕ್ಕೆಸೆಳೆದುಕೊಂಡಿತ್ತು.
ವಿಹಾರಾರ್ಥ ಪತ್ನಿ ಜುಬೈರಿಯಾ ಹಾಗೂ ಇಬ್ಬರು ಮಕ್ಕಳೊಂದಿಗೆ ಎರಡು ದಿವಸಗಳ ಹಿಂದೆ ಕಾಸರಗೋಡಿಗೆ ಆಗಮಿಸಿದ್ದ ಇವರು ಸೋಮವಾರ ಮೊಗ್ರಾಲ್ ಕಡಪ್ಪುರ ತಲುಪಿದ್ದರು. ಈ ಸಂದರ್ಭ ಆಟವಾಡುತ್ತಿದ್ದ ಇವರ ಮಗು ನೀರಿಗೆ ಬೀಳುತ್ತಿದ್ದಂತೆ ಮಗುವನ್ನು ರಕ್ಷಿಸಿ ದಡಕ್ಕೆ ತಲುಪಿಸಿಸಿದ ತಕ್ಷಣ ಬೃಹತ್ ಅಲೆಯೊಂದು ಮೀರ್‍ಮಹಮ್ಮದ್ ಅವರನ್ನು ಸಮುದ್ರಕ್ಕೆ ಕೊಚ್ಚಿಕೊಂಡು ಹೋಗಿತ್ತು. ಜತೆಗಿದ್ದವರು ಬೊಬ್ಬಿಡುತ್ತಿದ್ದಂತೆ ತಕ್ಷಣ ಸ್ಥಳದಲ್ಲಿದ್ದ ಮೀನುಕಾರ್ಮಿಕ ರಫೀಕ್ ಎಂಬವರು ಮೀರ್‍ಮಹಮ್ಮದ್ ಅವರನ್ನು ನೀರಿಂದ ಮೇಲಕ್ಕೆತ್ತಿದರೂ, ಪ್ರಯೋಜನವಾಗಿರಲಿಲ್ಲ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ಮೃತದೇಹ ಬೆಂಗಳೂರಿಗೆ ಕೊಂಡೊಯ್ಯಲಾಯಿತು.