ಗುವಾಹಟಿ: ಅಸ್ಸಾಂನ ಗುಡ್ಡಗಾಡು ಪ್ರದೇಶಗಳಿಂದ ಕೂಡಿರುವ ದಿಮಾ ಹಸಾವೊ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಲ್ಲಿದ್ದಲು ಗಣಿಯಲ್ಲಿ ಸೋಮವಾರ ನೀರು ತುಂಬಿಕೊಂಡು 9 ಮಂದಿ ಕಾರ್ಮಿಕರು ಸಿಲುಕಿಕೊಂಡಿದ್ದು, ಈ ಪೈಕಿ ಮೂರು ಕಾರ್ಮಿಕರು ಮೃತಪಟ್ಟಿದ್ದಾರೆ.
'35 ಸದಸ್ಯರ ಎನ್‌ಡಿಆರ್‌ಎಫ್ ತಂಡ ಹಾಗೂ ಎಸ್‌ಡಿಆರ್‌ಎಫ್ ತಂಡ ಮತ್ತು ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ನೀರಿನಲ್ಲಿ ತೇಲುತ್ತಿದ್ದ ಮೂವರ ಕಾರ್ಮಿಕರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ನೋಡಿದ್ದಾರೆ. ಆದರೆ, ಮೃತದೇಹಗಳನ್ನು ಇನ್ನೂವರೆಗೂ ಹೊರಗೆ ತೆಗೆದಿಲ್ಲ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಗಣಿ ಸುರಂಗವು ಸುಮಾರು 150 ಅಡಿ ಆಳದಲ್ಲಿದೆ. ಇದರಲ್ಲಿ 100 ಅಡಿಗಳ ವರೆಗೆ ನೀರು ತುಂಬಿದೆ. ಮಂಗಳವಾರ ಬೆಳಿಗ್ಗಿನಿಂದ 30ರಿಂದ 35 ಅಡಿ ಆಳದವರೆಗೆ ಇಳಿಯಲು ಮೂರು ರಕ್ಷಣಾ ತಂಡಗಳು ಪ್ರಯತ್ನ ನಡೆಸಿವೆ' ಎಂದು ಸಚಿವ ಕೌಶಿಕ್ ರಾಯ್ ತಿಳಿಸಿದರು.
'ಗಣಿಗಾಗಿ ಸುರಂಗ ಕೊರೆಯುವ ವೇಳೆ ಅಂತರ್ಜಲ ಸೆಲೆಯೊಂದು ಒಡೆದಿದೆ. ಇದರಿಂದಾಗಿ ನೀರು ಚಿಮ್ಮಿರಬಹುದು ಮತ್ತು ನೀರು ತುಂಬಿಕೊಂಡಿರಬಹುದು' ಎಂದು ಪೊಲೀಸ್ ಅಧಿಕಾರಿ ಮಾಯಾಂಕ್ ಕುಮಾರ್ ಹೇಳಿದರು.
ವ್ಯಕ್ತಿ ಬಂಧನ: 'ಇಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ನಡೆಸಲಾಗುತ್ತಿತ್ತು. ಪ್ರಕರಣ ಸಂಬಂಧ ಪುನಿಷ್ ನುನಿಸಾ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಜೊತೆಗೆ ನೌಕಾ ಪಡೆಯ ಈಜು ತಜ್ಞರನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಮನವಿ ಮಾಡಲಾಗಿದೆ. ಶೀಘ್ರದಲ್ಲಿಯೇ ಅವರೂ ಸೇರಿಕೊಳ್ಳಲಿದ್ದಾರೆ' ಎಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ 'ಎಕ್ಸ್' ಪೋಸ್ಟ್ ಮಾಡಿದ್ದಾರೆ.
(ಕಲ್ಲಿದ್ದಲು ಗಣಿಯೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್ ಹಾಗೂ ಸೇನಾ ತಂಡಗಳು ಮಂಗಳವಾರ ರಕ್ಷಣಾ ಕಾರ್ಯಚರಣೆ ನಡೆಸಿದವು -ಪಿಟಿಐ ಚಿತ್ರ