ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಸಂಸತ್ ಜಂಟಿ ಸಮಿತಿಯು(ಜೆಪಿಸಿ) ಬುಧವಾರ ತನ್ನ ಕರಡು ವರದಿಯನ್ನು ಬಹುಮತದಿಂದ ಅಂಗೀಕರಿಸಿದೆ. ಆದರೆ, ಇದು ವಕ್ಫ್ ಮಂಡಳಿಯನ್ನು ನಾಶಪಡಿಸುವ ಕಸರತ್ತು ಎಂದು ವಿಪಕ್ಷಗಳು ಕಿಡಿಕಾರಿವೆ.
ಬಿಜೆಪಿ ಸದಸ್ಯ ಜಗದಾಂಬಿಕ ಪಾಲ್ ಅವರ ಅಧ್ಯಕ್ಷತೆಯ ಜೆಪಿಸಿ 15-11 ಬಹುಮತದಿಂದ ಕರಡು ಶಾಸನದ ವರದಿಯನ್ನು ಅಂಗೀಕರಿಸಿತು.
ಈ ವರದಿಗೆ ವಿಪಕ್ಷ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ತಮ್ಮ ಭಿನ್ನಮತವನ್ನು ದಾಖಲಿಸಿದ್ದಾರೆ.
ಡಿಎಂಕೆ ಸಂಸದ ಎ. ರಾಜಾ ಮತ್ತು ಡಿಎಂಕೆ ಸಂಸದ ಮೊಹದ್ ಅಬ್ದುಲ್ಲಾ ಅವರು ಸಲ್ಲಿಸಿರುವ ತಮ್ಮ ಭಿನ್ನಮತದ ಟಿಪ್ಪಣಿಯಲ್ಲಿ ಮಸೂದೆಯನ್ನು 'ವಕ್ಫ್ ಸರ್ವನಾಶದ ಮಸೂದೆ' ಎಂದು ಹೆಸರಿಸಬೇಕು ಎಂದು ಉಲ್ಲೇಖಿಸಿದ್ದಾರೆ. ಪ್ರಸ್ತಾವಿತ ಶಾಸನವು ಕಾನೂನಿನಲ್ಲಿ ಸೇರಿಸಲಾದ ನಿಬಂಧನೆಗಳನ್ನು ತೆಗೆದುಹಾಕುವ 'ರಹಸ್ಯ ಪ್ರಯತ್ನ'ವಲ್ಲದೇ ಬೇರೇನೂ ಅಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಡೆದ ಸಭೆಯಲ್ಲಿ, ಸಮಿತಿಯು ಮಸೂದೆಗೆ 14 ತಿದ್ದುಪಡಿಗಳನ್ನು ಅಂಗೀಕರಿಸಿದೆ. ಈ ಎಲ್ಲ ತಿದ್ದುಪಡಿಗಳನ್ನು ಬಿಜೆಪಿ ಸದಸ್ಯರು ಪ್ರಸ್ತಾಪಿಸಿದ್ದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಎಪಿ, ಶಿವ ಸೇನಾ-ಯುಬಿಟಿ ಮತ್ತು ಎಐಎಂಐಎಂ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಸೂಚಿಸಿದ ಎಲ್ಲ ಶಿಫಾರಸುಗಳನ್ನು ಸಮಿತಿ ತಿರಸ್ಕರಿಸಿದೆ.
ಸಮಿತಿಯ 38ನೇ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲ್, ಈ ವರದಿಯನ್ನು ಗುರುವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಾಗುವುದು. ಶುಕ್ರವಾರ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ವರದಿ ಮಂಡನೆಯಾಗಲಿದೆ ಎಂದು ತಿಳಿಸಿದರು.
ಕಳೆದ ವರ್ಷದ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಆಧುನಿಕತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲಿದೆ ಎಂದು ಆಡಳಿತರೂಢ ಬಿಜೆಪಿ ಸದಸ್ಯರು ಪ್ರತಿಪಾದಿಸಿದ್ದಾರೆ. ಆದರೆ, ವಿಪಕ್ಷಗಳು ಇದನ್ನು ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿ ಮತ್ತು ವಕ್ಫ್ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿನ ಹಸ್ತಕ್ಷೇಪ ಎಂದು ಹರಿಹಾಯ್ದಿವೆ.
ವಕ್ಫ್ ಮಂಡಳಿಗೆ ಮುಸ್ಲಿಮೇತರ ವ್ಯಕ್ತಿಯನ್ನು ನೇಮಕ ಮಾಡಲು ಈ ತಿದ್ದುಪಡಿ ದಾರಿ ಮಾಡಿಕೊಡಲಿದೆ. ಧಾರ್ಮಿಕ ದತ್ತಿ ಉದ್ದೇಶಗಳಿಗಾಗಿ ಸಂಸ್ಥೆಗಳ ಸ್ಥಾಪನೆ ಹಾಗೂ ನಿರ್ವಹಣೆ ಸೇರಿದಂತೆ ನಾಗರಿಕರಿಗೆ ತಮ್ಮ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸಲು ಸಂವಿಧಾನವು 26ನೇ ವಿಧಿಯಡಿ ನೀಡಿರುವ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ ಎಂಬುದು ವಿಪಕ್ಷಗಳ ಕಳವಳವಾಗಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಸದಸ್ಯ ಇಮ್ರಾನ್ ಮಸೂದ್ 'ಸಂವಿಧಾನವು 26ನೇ ವಿಧಿ ಅಡಿ ನೀಡಿರುವ ನಮ್ಮ ಹಕ್ಕುಗಳನ್ನು ನೀವು ಉಲ್ಲಂಘಿಸಿದ್ದೀರಿ. ನೀವು ಏಕರೂಪದ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಿದ್ದೀರಿ. ಆದರೆ, ಹಿಂದೂ ದತ್ತಿ ಮಂಡಳಿ, ಸಿಖ್ ಮಂಡಳಿ, ಕ್ರೈಸ್ತ ಮಂಡಳಿಗಳಿಗೆ ಆ ಧರ್ಮದವರು ಮಾತ್ರ ಸದಸ್ಯರಾಗಬಹುದು. ಆದರೆ, ಇದನ್ನು ವಕ್ಫ್ ಮಂಡಳಿಗೆ ಏಕೆ ಅನ್ವಯಿಸುವುದಿಲ್ಲ' ಎಂದು ಪ್ರಶ್ನಿಸಿದರು.
'ಈ ಎಲ್ಲಾ ತಿದ್ದುಪಡಿಗಳು ವಕ್ಫ್ ಮಂಡಳಿಯ ಹಿತಕ್ಕೆ ವಿರುದ್ಧವಾಗಿವೆ. ಇವು ವಕ್ಫ್ ಮಂಡಳಿಯನ್ನು ನಾಶಮಾಡುತ್ತವೆ. ಮಂಡಳಿಗಳ ಕಾರ್ಯಚಟುವಟಿಕೆಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಹೆಚ್ಚಿಸುತ್ತವೆ. ವಕ್ಫ್ ಆಸ್ತಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲುಬಹುದು' ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಕಳವಳ ವ್ಯಕ್ತಪಡಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಸದಸ್ಯ ಕಲ್ಯಾಣ್ ಬ್ಯಾನರ್ಜಿ ಅವರು ಸಮಿತಿ ಮಾಡಿರುವ ಶಿಫಾರಸುಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.