ತಿರುಪತಿ: ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 6 ಜನ ಭಕ್ತರು ಉಸಿರು ಚೆಲ್ಲಿದ್ದಾರೆ, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಘಟನೆಯ ಬಳಿಕ ಪ್ರತ್ಯಕ್ಷದರ್ಶಿಗಳು ಅಲ್ಲಿನ ನಡೆದ ದೃಶ್ಯವನ್ನು ವಿವರಿಸಿದರೆ, ದೇವರ ದರ್ಶನ ಪಡೆಯಲು ಟೋಕನ್ ತೆಗೆದುಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದ ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರ ಗೋಳಾಟ ಹೇಳತೀರದಾಗಿತ್ತು.
20 ಮಂದಿ ಕುಟುಂಬ ಸದಸ್ಯರೊಂದಿಗೆ ತಿರುಪತಿಗೆ ಬಂದಿದ್ದ ಮಹಿಳೆಯೊಬ್ಬರು ಮಾಧ್ಯಮದೊಂದಿಗೆ ಘಟನೆಯ ಬಗ್ಗೆ ವಿವರಿಸುತ್ತಾ 'ಅತಿ ದಟ್ಟಣೆಯಿಂದಾಗಿ ಕಾಲ್ತುಳಿತ ಸಂಭವಿಸಿದೆ. ಪೊಲೀಸ್ ಅಧಿಕಾರಿಗಳು ಗೇಟ್ ತೆರೆದ ತಕ್ಷಣ ಭಕ್ತರು ಟೋಕನ್ ಖರೀದಿಸಲು ಮುಗಿಬಿದ್ದರು. ಈ ಹಿಂದೆ ಟೋಕನ್ ಪಡೆಯುವ ವ್ಯವಸ್ಥೆ ಇರಲಿಲ್ಲ. ನನ್ನ ಕುಟುಂಬದ ಇಪ್ಪತ್ತು ಸದಸ್ಯರಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. 11 ಗಂಟೆಗೆ ಸರತಿ ಸಾಲಿನಲ್ಲಿ ನಿಂತಿದ್ದ ನಮಗೆ ಹಾಲು ಮತ್ತು ಬಿಸ್ಕತ್‌ಗಳನ್ನು ನೀಡಲಾಯಿತು, ಆದರೆ ಹೆಚ್ಚಿನ ಸಂಖ್ಯೆಯ ಪುರುಷ ಯಾತ್ರಿಕರು ಟೋಕನ್‌ಗಾಗಿ ಮುಗಿಬಿದ್ದಿದ್ದರು. ಘಟನೆಯಲ್ಲಿ ಹಲವು ಮಹಿಳೆಯರು ಗಾಯಗೊಂಡಿದ್ದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು' ಎಂದು ಹೇಳಿದ್ದಾರೆ.
6 ಮಂದಿ ಸಾವು
ಕಾಲ್ತುಳಿತದಲ್ಲಿ ಕರ್ನಾಟಕದ ಒಬ್ಬರು ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದು, ಗಾಯಗೊಂಡ 40 ಮಂದಿಯಲ್ಲಿ 32 ಗಾಯಳುಗಳು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.