ಉಪ್ಪಳ: ತಲಸ್ಸೇಮೀಯಾದಿಂದ ಬಳಲುತ್ತಿರುವ ಮಗುವಿಗೆ ಸಚಿವರಿಂದ ಅದಾಲತಿನಲ್ಲಿ ಸಾಂತ್ವನ ದೊರಕಿದೆ.
ಪುತ್ರಿಗೆ ಅಂಗ ವೈಕಲ್ಯ ಕಾರ್ಡ್, ವಿಶೇಷ ಚೇತನ ಪಿಂಚಣಿ, ಚಿಕಿತ್ಸಾಧನ ಸಹಾಯ, ವಿದ್ಯುತ್ ಸಂಪರ್ಕ, ನೀಡುವುದಾಗಿ ಸಚಿವರು ಭರವಸೆ ನೀಡಿದರು.
ಜೀವನದ ಹಲವಾರು ಸಮಸ್ಯೆಗಳೊಂದಿಗೆ ಎಣ್ಮಕಜೆ ಗ್ರಾಮ ಪಂಚಾಯತಿಯ ಕುರಡ್ಕ ಖಂಡಿಗೆಯ ಸಂಧ್ಯಾ ಸರಸ್ವತಿ ಹಾಗೂ ಕುಟುಂಬ ಶನಿವಾರ ಮಂಗಲ್ಪಾಡಿಯಲ್ಲಿ ನಡೆದ ತಾಲೂಕು ಮಟ್ಟದ ಅದಾಲತ್ ಗೆ ಸಮಸ್ಯೆಗಳೊಂದಿಗೆ ಆಗಮಿಸಿದ್ದರು. ಪರಿಶಿಷ್ಟ ವರ್ಗಕ್ಕೆ ಒಳಪಟ್ಟ ಸಂಧ್ಯಾ ಅವರ ಏಳು ವಯಸ್ಸಿನ ಪುತ್ರಿ ತಲಸ್ಸೇಮಿಯ ರೋಗ ಬಾಧಿತಳಾಗಿದ್ದಾಳೆ. ಮಗಳ ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಅಗತ್ಯವಿದೆ. ತಿಂಗಳಿಗೆ ನಾಲ್ಕು ಬಾರಿ ಪುತ್ರಿಗೆ ರಕ್ತ ಬದಲಾವಣೆ ಮಾಡುವ ಆವಶ್ಯಕತೆಯ ಹಿನ್ನೆಲೆಯಲ್ಲಿ ಪತಿಗೆ ಒಂದು ತಿಂಗಳಿನಲ್ಲಿ ಎಂಟು ದಿನ ಮಾತ್ರ ಉದ್ಯೋಗ ನಿರ್ವಹಿಸಲು ಸಾಧ್ಯವಾಗುವ ಪರಿಸ್ಥಿತಿ ಇದೆ. ಕುಟುಂಬಕ್ಕೆ ಬೇರೆ ಯಾವುದೇ ರೀತಿಯ ಅದಾಯ ಮಾರ್ಗಗಳೂ ಇಲ್ಲದೆ ಕುಟುಂಬ ಪರಿತಪಿಸುತ್ತಿತ್ತು. 10 ವರ್ಷದ ಮೊದಲ ಮಗಳನ್ನು ಹೊದಿರುವ ಸಣ್ಣ ಕುಟುಂಬವಾಗಿದೆ ನಮ್ಮದು ಎಂದು ಅವರು ಹೇಳಿದರು. ಸಂಧ್ಯಾ ಅವರಿಗೆ ಸಚಿವರಿಗೆ ವಿಷಯ ತಿಳಿಸಲು ಭಾಷೆಯ ಸಮಸ್ಯೆ ಇರುವುದರಿಂದ ಅವರ ಪರವಾಗಿ ಎಣ್ಮಕಜೆ ಪಂಚಾಯತಿ ಸದಸ್ಯರಾದ ಸೌದಾಬಿ ಹನೀಫ್ ಅವರ ಮೂಖೇನ ಅವರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಸಚಿವರಿಗೆ ಮನವರಿಕೆ ಮಾಡಲಾಯಿತು.
ಬಗೆಹರಿದ ಲೈಫ್ ಮನೆ ಸಮಸ್ಯೆ:
ಲೈಫ್ ಭವನ ಯೋಜನೆಯ ಭಾಗವಾಗಿ ಮೂರು ಲಕ್ಷ: ರೂ. ಲಭಿಸಿದ್ದರೂ ಮನೆ ನಿರ್ಮಿಸಲು ಸಾಧ್ಯವಾಗದ ಸಮಸ್ಯೆಯೂ ಅದಾಲತಿನಲ್ಲಿ ಕೊನೆಗೂ ಪರಿಹಾರಕಂಡುಕೊಂಡಿತು.
ಸದ್ಯಕ್ಕೆ ಈ ಕುಟುಂಬ ಎಣ್ಮಕಜೆಯಲ್ಲಿನ ಸರ್ಕಾರಿ ಭೂಮಿಯ ಜನವಸತಿ ಇಲ್ಲದ ಮನೆಯಲ್ಲಿ ತಾತ್ಕಾಲಿಕವಾಗಿ ನೆಲೆಸಿದೆ. ಈ ಮನೆಗೆ ಕಟ್ಟಡ ಸಂಖ್ಯೆ ಲಭಿಸಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ. ಈಗ ಪುತ್ರಿಯ ಚಿಕಿತ್ಸೆಗಾಗಿ ಕರ್ನಾಟಕವನ್ನು ಅವಲಂಬಿಸಿದ್ದಾರೆ.
ವಿಷಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಆದಷ್ಟು ಶೀರ್ಘರ ಈ ಕುಟುಂಬಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೆಎಸ್‍ಇಬಿ ಕಾರ್ಯಪಾಲಕ ಎಂಜಿನಿಯರ್‍ಗೆ ಸಚಿವರು ಸೂಚಿಸಿದರು.