ಬನಿಹಾಲ್/ ಜಮ್ಮು: ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯಡಿ (ಯುಎಸ್‌ಬಿಆರ್‌ಎಲ್) ನಿರ್ಮಾಣಗೊಂಡಿರುವ ಕಠರಾ-ಬನಿಹಾಲ್ ಮಾರ್ಗದಲ್ಲಿ ರೈಲಿನ ವೇಗದ ಪರೀಕ್ಷೆಗೆ ನಡೆಸಿದ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ.
ಪರ್ವತಗಳು ಮತ್ತು ಕಣಿವೆಗಳು ಸೇರಿದಂತೆ ಅತ್ಯಂತ ಸವಾಲಿನಿಂದ ಕೂಡಿರುವ ಈ ಭೂಪ್ರದೇಶದಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿರುವುದು ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ಬರೆದಿದೆ ಎಂದು ರೈಲ್ವೆಯ ಉತ್ತರ ವಲಯದ ಸುರಕ್ಷತಾ ವಿಭಾಗದ ಕಮಿಷನರ್ ದಿನೇಶ್ ಚಂದ್ ದೇಶ್ವಾಲ್ ತಿಳಿಸಿದ್ದಾರೆ.
'ಪ್ರಾಯೋಗಿಕ ಸಂಚಾರದಲ್ಲಿ ರೈಲು ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸಿದೆ. ಕಠರಾ ನಿಲ್ದಾಣದಿಂದ ಬೆಳಿಗ್ಗೆ 10.30ಕ್ಕೆ ಹೊರಟ ರೈಲು ಒಂದೂವರೆ ಗಂಟೆಯಲ್ಲಿ ಬನಿಹಾಲ್ ನಿಲ್ದಾಣ ತಲುಪಿದೆ. ಮಧ್ಯಾಹ್ನ 2ಕ್ಕೆ ಬನಿಹಾಲ್ ನಿಲ್ದಾಣ ಬಿಟ್ಟ ರೈಲು, 3.30ಕ್ಕೆ ಕಠರಾ ತಲುಪಿದೆ' ಎಂದು ಮಾಹಿತಿ ನೀಡಿದರು.
ಪ್ರಾಯೋಗಿಕ ಸಂಚಾರದ ವೇಳೆ ಕಲೆಹಾಕಿದ ಮಾಹಿತಿಗಳನ್ನು ವಿಶ್ಲೇಷಿಸಿದ ಬಳಿಕ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.