ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಹಾಗೂ ಸಂತ್ರಸ್ತೆಗೆ ನ್ಯಾಯ ದೊರಕಿಸಲು ಆಗ್ರಹಿಸಿ ಮಧುರೈನಿಂದ ಚೆನ್ನೈಗೆ ರ್‍ಯಾಲಿ ನಡೆಸಲು ಮುಂದಾದ ತಮಿಳುನಾಡು ಬಿಜೆಪಿ ಮಹಿಳಾ ಮೋರ್ಚಾದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಕ್ಷದ ನಾಯಕಿ ಖುಷ್ಬು ಸುಂದರ್, ತಮಿಳುನಾಡು ಮಹಿಳಾ ಮೋರ್ಚಾದ ಅಧ್ಯಕ್ಷೆ ಉಮಾರತಿ ರಾಜನ್, ಬಿಜೆಪಿ ಶಾಸಕಿ ಡಾ.ಸಿ ಸರಸ್ವತಿ ಸೇರಿದಂತೆ ಹಲವು ನಾಯಕಿಯರು ಚೆನ್ನೈನಲ್ಲಿ ಆಯೋಜಿಸಲಾಗಿದ್ದ ರ್‍ಯಾಲಿಯಲ್ಲಿ ಭಾಗಿಯಾಗಲು ಬಂದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ.
ಖುಷ್ಬು ಮತ್ತು ಉಮಾರತಿ ರಾಜನ್ ಅವರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಸಂತ್ರಸ್ತಗೆ ನ್ಯಾಯಕ್ಕಾಗಿ ಆಗ್ರಹಿಸಿ ಶಾಂತಿಯುತವಾಗಿ ರ್‍ಯಾಲಿ ನಡೆಸುವುದನ್ನು ತಡೆಯಲಾಗಿದೆ ಎಂದು ಆರೋಪಿಸಿದ್ದಾರೆ.
'ನ್ಯಾಯ ಕೇಳುವ ನಮ್ಮ ಧ್ವನಿಯನ್ನು ಹತ್ತಿಕ್ಕಲು ಡಿಎಂಕೆ ಸರ್ಕಾರ ಹತಾಶ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೆ ನಮ್ಮ ವೀರ ಸಹೋದರಿಯರು ಮಧುರೈನಲ್ಲಿ ಸಮಾವೇಶಗೊಂಡಿದ್ದಾರೆ' ಎಂದು ತಮಿಳುನಾಡಿನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಡಿಎಂಕೆ ಸರ್ಕಾರವು ತಮಿಳುನಾಡಿನಲ್ಲಿ ಬಿಜೆಪಿಯನ್ನು ತನ್ನ ದಬ್ಬಾಳಿಕೆಗೆ ಬಲಿಯಾಗುವಂತೆ ಮಾಡಲು ಎಲ್ಲಾ ಶಕ್ತಿಯನ್ನು ಬಳಸಬಹುದು. ಆದರೆ ಬಿಜೆಪಿಯ ಕಾರ್ಯಕರ್ತರು ಪದೇ ಪದೇ ದಬ್ಬಾಳಿಕೆಯ ಬೂದಿಯಿಂದ ಮೇಲೆದ್ದು ತಮಿಳುನಾಡಿನ ಜನರಿಗಾಗಿ ಹೋರಾಡುತ್ತಾರೆ' ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.