ತಿರುವನಂತಪುರ: ಕಾಲಕ್ಕೆ ತಕ್ಕಂತೆ ದೇವಸ್ಥಾನದ ಸಂಪ್ರದಾಯ, ಪದ್ಧತಿಗಳು ಬದಲಾಗಬೇಕು ಎಂಬ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಗೆ ರಾಜ್ಯ ಸಾರಿಗೆ ಸಚಿವ ಕೆ.ಬಿ ಗಣೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ದೇವಸ್ಥಾನಗಳಲ್ಲಿನ ಆಚರಣೆಗಳ ಬಗ್ಗೆ ತಂತ್ರಿಗಳೇ ನಿರ್ಧರಿಸಬೇಕು, ಸರ್ಕಾರವಲ್ಲ ಎಂದು ಅವರು ಹೇಳಿದ್ದಾರೆ.
ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್) ನಿರ್ದೇಶಕ ಮಂಡಳಿ ಸದಸ್ಯರೂ ಆಗಿರುವ ಸಚಿವ ಕೆ.ಬಿ ಗಣೇಶ್ ಕುಮಾರ್, ಸರ್ಕಾರಕ್ಕೆ ಕೆಲವು ಬದಲಾವಣೆಗಳು ಅಗತ್ಯವೆಂದು ಭಾವಿಸಿದರೆ, ತಂತ್ರಿಗಳೊಂದಿಗೆ ಸಮಾಲೋಚನೆ ನಡೆಸಬೇಕು. ಬಳಿಕ 'ದೇವಪ್ರಶ್ನೆ' ಕೇಳಿ ಮಾಡಬೇಕು ಎಂದು ತಿಳಿಸಿದ್ದಾರೆ.
ವಿವಿಧ ದೇವಾಲಯಗಳು ತಮ್ಮದೇ ಆದ ಪದ್ಧತಿ ಮತ್ತು ಆಚರಣೆಗಳನ್ನು ಹೊಂದಿವೆ. ಭಕ್ತರು ಅವುಗಳನ್ನು ಪಾಲಿಸಬೇಕು. ಇತರರು(ಸರ್ಕಾರ) ಆ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕಿಲ್ಲ ಎಂದು ರಾಜ್ಯ ಸಚಿವ ಸಂಪುಟದಲ್ಲಿ ಕೇರಳ ಕಾಂಗ್ರೆಸ್ (ಬಿ) ಪ್ರತಿನಿಧಿ ಕುಮಾರ್ ಹೇಳಿದ್ದಾರೆ.
'ದೇವಸ್ಥಾನದೊಳಗೆ ಪ್ರವೇಶ ಪಡೆಯುವ ಮೊದಲು ಪುರುಷರು ಮೇಲಂಗಿ ಕಳಚಬೇಕು ಎಂಬ ಪರಿಪಾಟವನ್ನು ಕೈಬಿಡಬೇಕು' ಎಂದು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೆಂಬಲಿಸಿದ್ದರು. ಸಿಎಂ ನಿರ್ಧಾರವನ್ನು ಎನ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಜಿ.ಸುಕುಮಾರನ್ ನಾಯರ್ ತೀವ್ರವಾಗಿ ಟೀಕಿಸಿದ್ದಾರೆ.
ಸ್ವಾಮೀಜಿಯವರ ನಿಲುವನ್ನು ಸ್ವಾಗತಿಸಿದ ಮುಖ್ಯಮಂತ್ರಿ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಇಂತಹ ಆಚರಣೆಗಳನ್ನು ತಪ್ಪಿಸಬಹುದು ಎಂದು ಹೇಳಿದ್ದರು.
ಏತನ್ಮಧ್ಯೆ, ಈ ವಿಷಯವನ್ನು ಆಯಾ ಸಮುದಾಯಗಳಿಗೆ ಬಿಡಬೇಕು ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಹೇಳಿದ್ದಾರೆ.
ಆರಾಧನಾ ಸ್ಥಳಗಳಲ್ಲಿ ಸಂಪ್ರದಾಯಗಳನ್ನು ಬದಲಾಯಿಸಬೇಕೇ ಎಂಬ ಬಗ್ಗೆ ಅವರೇ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿ, ಕೇರಳದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಇಂತಹ ವಿಷಯಗಳನ್ನು ಚರ್ಚಿಸಲು ಇದು ಸರಿಯಾದ ಸಮಯವಲ್ಲ ಎಂದೂ ಅವರು ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ.ಮುರಳೀಧರನ್ ಕೂಡ ದೇವಸ್ಥಾನದ ಆಚಾರ ವಿಚಾರಗಳನ್ನು ತಂತ್ರಿಗಳೇ ನಿರ್ಧರಿಸಬೇಕು ಎಂದು ಹೇಳಿದ್ದಾರೆ. ಅನಾದಿ ಕಾಲದ ಸಂಪ್ರದಾಯಗಳನ್ನು ಬದಲಾಯಿಸಲು ರಾಜಕೀಯದ ಹಸ್ತಕ್ಷೇಪದ ಅಗತ್ಯವಿಲ್ಲ. ದೇವಸ್ಥಾನಗಳಿಗೇ ಈ ವಿಚಾರವನ್ನು ಬಿಡಿ ಎಂದು ಅವರು ತಿಳಿಸಿದ್ದಾರೆ.