HEALTH TIPS

ಝಡ್‌-ಮೋಡ್ ಸುರಂಗ ಮಾರ್ಗ ಉದ್ಘಾಟನೆ: ಲಡಾಖ್‌ಗೆ ಸರ್ವ ಋತುವಿನಲ್ಲೂ ಸಂಪರ್ಕ

 ಶ್ರೀನಗರ: ಕಾಶ್ಮೀರದ ಗಾಂದರ್‌ಬಲ್‌ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ 6.5 ಕಿ.ಮೀ ಉದ್ದದ ಝಡ್‌-ಮೋಡ್‌ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉದ್ಘಾಟಿಸಿದರು.

ಶ್ರೀನಗರ-ಲೇಹ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಈ ದ್ವಿಪಥ ಸುರಂಗವು ಶ್ರೀನಗರದಿಂದ ಸೋನ್‌ಮರ್ಗ್ ನಡುವಿನ ಸಂಪರ್ಕವನ್ನು ಸುಧಾರಿಸಲಿದೆ ಮತ್ತು ಪಾಕಿಸ್ತಾನ, ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಆಯಕಟ್ಟಿನ ಪ್ರದೇಶವಾಗಿರುವ ಲಡಾಖ್‌ಗೆ ಸರ್ವ ಖತುವಿನಲ್ಲೂ ಸಂಪರ್ಕ ಕಲ್ಪಿಸುತ್ತದೆ.


ಉದ್ಘಾಟನೆ ಬಳಿಕ ಸುರಂಗದ ಒಳಗೆ ತೆರಳಿ ಕಾರ್ಯಕ್ರಮ ನಿಗದಿಯಾದ ಸ್ಥಳದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನಾನು ನೀಡಿರುವ ಎಲ್ಲ ವಾಗ್ದಾನಗಳನ್ನೂ ಈಡೇರಿಸುವೆ. ಎಲ್ಲದಕ್ಕೂ ಸರಿಯಾದ ಸಮಯ ಬರಬೇಕು. ಸರಿಯಾದ ಸಮಯಕ್ಕೆ ಎಲ್ಲವೂ ನಡೆಯಲಿವೆ ಎಂದು ಹೇಳಿದರು.

ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ಮರಳಿಸಬೇಕೆಂದು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದಕ್ಕೆ ಪ್ರತಿಯಾಗಿ ಮೋದಿ ಈ ಹೇಳಿಕೆ ನೀಡಿದರು.

'ಜಮ್ಮು ಮತ್ತು ಕಾಶ್ಮೀರ ಈ ದೇಶದ ಕಿರೀಟ. ಇದು ಅತ್ಯಂತ ಸುಂದರ ಮತ್ತು ಸಮೃದ್ಧವಾಗಿರಬೇಕು' ಎಂದು ಬಯಸುತ್ತೇನೆ ಎಂದರು.

'ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲಸುತ್ತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇದರ ಪರಿಣಾಮವನ್ನು ಕಾಣುತ್ತಿದ್ದೇವೆ. ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವೊಂದು ಇಂದು ಆರಂಭವಾಗಿದೆ' ಎಂದು ಹೇಳಿದರು.

ಯೋಜನೆಯನ್ನು ನನಸು ಮಾಡಿದ ಎಂಜಿಯರ್‌ಗಳು ಮತ್ತು ಕಾರ್ಮಿಕರೊಂದಿಗೆ ಸಂವಾದ ನಡೆಸಿದರು. ಪ್ರತಿಕೂಲ ಹವಾಮಾನದ ನಡುವೆಯೂ ಸುರಂಗ ನಿರ್ಮಾಣ ಮಾಡಿದ ಅವರ ಶ್ರಮವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್‌ ಮನೋಜ್‌ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾಗಿಯಾಗಿದ್ದರು.

ಯುಪಿಎ ಎರಡನೇ ಅವಧಿಯ ಸರ್ಕಾರದಲ್ಲಿಯೇ ಯೋಜನೆಯನ್ನು ರೂಪಿಸಲಾಗಿತ್ತು. ಆಗಿನ ಸಾರಿಗೆ ಸಚಿವ ಸಿ.ಪಿ ಜೋಶಿ ಅವರು 2012ರಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.‌

ಸುರಂಗ ಮಾರ್ಗದ ಕಾಮಗಾರಿಯು 2015ರಲ್ಲಿ ಆರಂಭವಾಗಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ 2018ರಲ್ಲಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. 2019ರಲ್ಲಿ ಮತ್ತೆ ಟೆಂಡರ್‌ ಕರೆಯಲಾಗಿತ್ತು. 2020 ಜನವರಿಯಲ್ಲಿ ಎಪಿಸಿಒ ಇನ್‌ಫ್ರಾಟೆಕ್‌ ಸಂಸ್ಥೆ ನಿರ್ಮಾಣದ ಹೊಣೆ ವಹಿಸಿಕೊಂಡಿತ್ತು.

 ಝಡ್‌-ಮೋಡ್‌ ಸುರಂಗದ ಹೊರನೋಟ -ಪಿಟಿಐ ಚಿತ್ರ . ಝಡ್‌-ಮೋಡ್‌ ಸುರಂಗದ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವ ನಿತಿನ್‌ ಗಡ್ಕರಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಮತ್ತು ಲೆ.ಗವರ್ನರ್‌ ಮನೋಜ್‌ ಸಿನ್ಹಾ ಅವರು ಫೋಟೊಗೆ ಪೋಸ್‌ ನೀಡಿದರು -ಪಿಟಿಐ ಚಿತ್ರ
  • ಸುರಂಗ ನಿರ್ಮಾಣಕ್ಕೂ ಮೊದಲು ಈ ರಸ್ತೆಯು ಝಡ್‌ ಆಕಾರದಲ್ಲಿ ಇದ್ದ ಕಾರಣ ಇದಕ್ಕೆ ಝಡ್‌-ಮೋಡ್‌ ಸುರಂಗ ಎಂದು ಹೆಸರಿಡಲಾಗಿದೆ. ಹಿಂದಿಯಲ್ಲಿ ಝಡ್‌-ಮೋಡ್‌ ಎಂದರೆ ಝಡ್ -ತಿರುವು ಎಂದರ್ಥ.

  • ಅಕ್ಟೋಬರ್‌ 2024ರಲ್ಲಿ ಝಡ್‌-ಮೋಡ್‌ ಸುರಂಗ ಸಮೀಪ ಉಗ್ರರು ದಾಳಿ ನಡೆಸಿದ್ದರು. ಪರಿಣಾಮವಾಗಿ ಏಳು ಮಂದಿ ಕಾರ್ಮಿಕರು ಮೃತಪಟ್ಟಿದ್ದರು.

  • 6.5 ಕಿ.ಮೀ - ಸುರಂಗ ಮಾರ್ಗದ ಉದ್ದ

  • ₹2,400 ಕೋಟಿ - ಸುರಂಗ ನಿರ್ಮಾಣಕ್ಕೆ ಮಾಡಲಾದ ವೆಚ್ಚ

  • 7.5 ಮೀ - ದ್ವಿಪಥ ಸುರಂಗ ಮಾರ್ಗದ ರಸ್ತೆಯಲ್ಲಿ ತುರ್ತು ಸನ್ನಿವೇಶದಲ್ಲಿ ಪಾರಾಗಲು ನಿರ್ಮಿಸಿರುವ ಮಾರ್ಗದ ಅಗಲ

  • 8,650 ಅಡಿ - ಸಮುದ್ರ ಮಟ್ಟದಿಂದ ಸುರಂಗ ಮಾರ್ಗವಿರುವ ಎತ್ತರ

ರಕ್ಷಣಾತ್ಮಕ ಮಹತ್ವ

  • ಸರ್ವ ಋತುವಿನಲ್ಲೂ ಲಡಾಖ್‌ಗೆ ಸಂಪರ್ಕ

  • ರಕ್ಷಣಾ ಸರಕುಗಳ ಸಾಗಾಟಕ್ಕೆ ನೆರವು

  • ಸದ್ಯ ಸೇನೆಯು ಲಡಾಖ್‌ನ ಮುಂಚೂಣಿ ಸ್ಥಳಗಳಿಗೆ ಸಿಬ್ಬಂದಿ ನಿಯೋಜಿಸಲು ವಾಯುಮಾರ್ಗವನ್ನೇ ನೆಚ್ಚಿಕೊಂಡಿದೆ ಪ್ರವಾಸೋದ್ಯಮ ಮಹತ್ವ

  • ಸೋನಾಮಾರ್ಗ್ ಮತ್ತಿತರ ರಮಣೀಯ ತಾಣಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ

  • ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಆರ್ಥಿಕ ಅಭಿವೃದ್ಧಿ ಸಾಮಾಜಿಕ-ಸಾಂಸ್ಕೃತಿಕ ಸಮನ್ವಯಕ್ಕೆ ಪ್ರೋತ್ಸಾಹ ಸಿಗಲಿದೆ‌

  • ಬೇಸಿಗೆಯಲ್ಲಿ ಪ್ರವಾಸಿಗಳು ಸ್ಥಳೀಯರಿಂದ ತುಂಬಿ ತುಳುಕುವ ಈ ಪ್ರದೇಶವು ಚಳಿಗಾಲದಲ್ಲಿ ಹಿಮಪಾತದಿಂದ ಕೂಡಿರುತ್ತಿತ್ತು.

  • ಜೋಜಿಲಾ ಸುರಂಗವು 2028ರಲ್ಲಿ ಪೂರ್ಣಗೊಂಡ ನಂತರ ಝಡ್‌-ಮೋಡ್‌ ಸುರಂಗವು ಕಾಶ್ಮೀರ ಕಣಿವೆ ಮತ್ತು ಲಡಾಖ್‌ ನಡುವಿನ ಅಂತರವನ್ನು 49 ಕಿ.ಮೀ ನಿಂದ 43 ಕಿ.ಮೀ ತಗ್ಗಿಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries