ಇಂಫಾಲ್: ಮಣಿಪುರ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರು ರಾಜಭವನದಲ್ಲಿ ಪೊಲೀಸ್, ಸಿಆರ್‌ಪಿಎಫ್, ಬಿಎಸ್‌ಎಫ್, ಅಸ್ಸಾಂ ರೈಫಲ್ಸ್‌ನ ಹಿರಿಯ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿದರು. ರಾಜ್ಯದ ಭದ್ರತಾ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ಪಡೆದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
'ಭದ್ರತಾ ಪರಿಕರಗಳು ಮತ್ತು ಅವುಗಳ ನಿಯೋಜನೆಯನ್ನು ಪರಿಶೀಲಿಸಿದರು' ಎಂದು ಹೇಳಿಕೆ ತಿಳಿಸಿದೆ.
ರಾಜ್ಯದ ಜನರ ಸುರಕ್ಷತೆ ಮತ್ತು ರಕ್ಷಣೆಗೆ ಆದ್ಯತೆ ನೀಡಬೇಕೆಂದು ಡಿಜಿಪಿ ಅವರಿಗೆ ಸೂಚಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಆಡಳಿತಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೇನೆ ಮತ್ತು ಅರೆಸೇನಾ ಪಡೆಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಡಿಜಿಪಿ ರಾಜೀವ್ ಸಿಂಗ್, ಐಜಿಎಆರ್ (ದಕ್ಷಿಣ) ಮೇಜರ್ ಜನರಲ್ ರಾವ್‌ರೂಪ್ ಸಿಂಗ್ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.