ತಿರುಪತಿ: ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳದಲ್ಲಿ ಶ್ರೀ ವೆಂಕಟೇಶ್ವರ ದೇವಾಲಯದ ಮಾದರಿ ನಿರ್ಮಿಸಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ನಿರ್ಧರಿಸಿದೆ.
'ಪ್ರಯಾಗ್‌ರಾಜ್‌ನ ಭಜನ್‌ದಾಸ್ ರಸ್ತೆಯ ಸೆಕ್ಟರ್-6ರಲ್ಲಿ 2.89 ಎಕರೆ ಪ್ರದೇಶದಲ್ಲಿ ದೇವಾಲಯದ ಮಾದರಿ ನಿರ್ಮಿಸಲು ನಿರ್ಧರಿಸಲಾಗಿದೆ' ಎಂದು ಟಿಟಿಡಿಯ ಕಾರ್ಯಕಾರಿ ಅಧಿಕಾರಿ ಜೆ.ಶ್ಯಾಮಲಾ ರಾವ್ ತಿಳಿಸಿದ್ದಾರೆ.
ಜಗತ್ತಿನ ಅತೀ ದೊಡ್ಡ ಧಾರ್ಮಿಕ ಸಭೆಯಾದ 'ಮಹಾ ಕುಂಭ ಮೇಳ'ವು ಇದೇ ಜ.13ರಿಂದ ಜ.26ರವರೆಗೆ ನಡೆಯಲಿದೆ.
'ಇಲ್ಲಿರುವ ನಾಗಾ ವಾಸುಕಿ ದೇವಾಲಯದ ಸಮೀಪದಲ್ಲಿಯೇ ಮಾದರಿ ದೇವಾಲಯವನ್ನು ನಿರ್ಮಾಣ ಮಾಡಲಾಗುವುದು' ಎಂದು ವಿವರಿಸಿದರು.
'ಮಹಾ ಕುಂಭ ಮೇಳದಲ್ಲಿ ದೇವಾಲಯದ ಮಾದರಿ ನಿರ್ಮಿಸಲಾಗುವುದು. ಇದಕ್ಕೆ ನಿಯೋಜಿಸಿರುವ ಸಿಬ್ಬಂದಿಯನ್ನು ಕರೆದೊಯ್ಯವ 'ಧರ್ಮರಥ'ವನ್ನು ಜ.8ರಂದು ತಿರುಮಲದಲ್ಲಿ ಬೆಳಿಗ್ಗೆ 7 ಗಂಟೆಗೆ ಕಳುಹಿಸಿಕೊಡಲಾಗುವುದು' ಎಂದು ರಾವ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಿರುಮಲದಲ್ಲಿ ನಡೆಯುವ ರೀತಿಯಲ್ಲೇ, ಅದ್ಧೂರಿಯಾಗಿ 'ಉತ್ಸವ' ಆಚರಿಸಲಾಗುತ್ತದೆ. ನಿತ್ಯವೂ 'ಸುಪ್ರಭಾತ'ದಿಂದ 'ಏಕಾಂತ'ದವರೆಗೂ ಸೇವೆಗಳು ನೆರವೇರಲಿವೆ. ಜ.16ರಿಂದ 26 ಹಾಗೂ ಫೆ.3ರಿಂದ ಫೆ.12ರವರೆಗೆ 'ಶ್ರೀವಾರಿ ಕಲ್ಯಾಣಂ' ನಡೆಸಲಾಗುವುದು. ಧಾರ್ಮಿಕ ಕೆಲಸ ನೆರವೇರಿಸಲು ಅರ್ಚಕರ ತಂಡ, ವೇದಾ ಪಂಡಿತರು ಹಾಗೂ ದೇವಾಲಯವನ್ನು ನಿರ್ವಹಣೆ ಮಾಡುವ ವಿವಿಧ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು' ಎಂದು ಹೇಳಿದ್ದಾರೆ.