ನವದೆಹಲಿ: ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಸೂಕ್ಷ್ಮ ವಿಷಯ ಎಂದು ಹೇಳಿರುವ ಸುಪ್ರೀಂಕೋರ್ಟ್, ಈ ಪಿಡುಗನ್ನು ಎದುರಿಸಲು ಪರಿಣಾಮಕಾರಿ ಕಾರ್ಯವಿಧಾನ ರೂಪಿಸುವುದಾಗಿ ಶುಕ್ರವಾರ ಹೇಳಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನದ ವಿಶ್ವವಿದ್ಯಾಲಯಗಳು, ಖಾಸಗಿ ಹಾಗೂ ಡೀಮ್ಡ್ ವಿ.ವಿಗಳಲ್ಲಿ ವಿದ್ಯಾರ್ಥಿಗಳು ಜಾತಿ ಆಧಾರಿತ ತಾರತಮ್ಯಕ್ಕೆ ಒಳಗಾಗುವುದನ್ನು ತಡೆಯಲು ರೂಪಿಸಿರುವ ಕರಡು ನಿಯಮಾವಳಿ ಸಂಬಂಧ ಅಧಿಸೂಚನೆ ಹೊರಡಿಸುವಂತೆ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾಂ ಅವರನ್ನೊಳಗೊಂಡ ಪೀಠವು, ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ನಿರ್ದೇಶನ ನೀಡಿತು.
ದೇಶದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2012ರ ನಿಯಮಾವಳಿಗಳ ಅಡಿಯಲ್ಲಿ ಜಾತಿ ತಾರತಮ್ಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಿರುವ ಒಟ್ಟು ದೂರುಗಳ ಮಾಹಿತಿಯನ್ನು ಆರು ವಾರಗಳ ಒಳಗಾಗಿ ನೀಡುವಂತೆಯೂ ಸೂಚಿಸಿತು.
'ನಾವು ಈ ಸೂಕ್ಷ್ಮ ವಿಷಯದ ಬಗ್ಗೆ ಚೆನ್ನಾಗಿ ಅರಿತಿದ್ದು, ಇದನ್ನು ತಡೆಯಲು ಏನನ್ನಾದರೂ ಮಾಡುತ್ತೇವೆ. 2012ರ ನಿಯಮಾವಳಿಗಳ ಪಾಲನೆಯಾಗುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಕೆಲವು ಪರಿಣಾಮಕಾರಿ ಕಾರ್ಯವಿಧಾನವನ್ನು ಕಂಡುಕೊಳ್ಳಬೇಕಿದೆ' ಎಂದು ಹೇಳಿತು.
ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರಮ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ರೋಹಿತ್ ವೇಮುಲ ಹಾಗೂ ಪಾಯಲ್ ತದ್ವಿ ಅವರ ಪೋಷಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠವು ನಡೆಸುತ್ತಿದೆ. ವಿ.ವಿಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹೈದರಾಬಾದ್ ಕೇಂದ್ರೀಯ ವಿ.ವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಅವರು 2016ರಲ್ಲಿ ಹಾಗೂ ಮುಂಬೈನ ಟಿ.ಎನ್. ಟೋಪಿವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಯಲ್ ತದ್ವಿ ಅವರು 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಬ್ಬರೂ ಕ್ಯಾಂಪಸ್‌ನಲ್ಲಿ ಜಾತಿ ತಾರತಮ್ಯ ಎದುರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.