ನವದೆಹಲಿ: ಸಶಸ್ತ್ರ ಪಡೆಯ ನಿವೃತ್ತ ಸಿಬ್ಬಂದಿ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.
'ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಮೂಲಕ ಅಂಗವಿಕಲರ ಪಿಂಚಣಿ ಸೌಲಭ್ಯ ಪಡೆದ ಪ್ರತಿಯೊಬ್ಬರನ್ನೂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವಂತೆ ಮಾಡುವುದು ಸರಿಯಲ್ಲ.
ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸುವಾಗ ವಿವೇಚನೆ ಬಳಸಬೇಕು' ಎಂದು ನ್ಯಾಯಾಮೂರ್ತಿ ಅಭಯ್ ಎಸ್. ಓಕ ಮತ್ತು ಉಜ್ವಲ್ ಭೂಯಾನ್ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.
'ಕೆಲವು ವಿಚಾರಗಳನ್ನು ಪ್ರಾಯೋಗಿಕ ದೃಷ್ಟಿಕೋನದಿಂದ ನೋಡಬೇಕು. ಒಬ್ಬ ಯೋಧ 15ರಿಂದ 20 ವರ್ಷ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಒಂದು ವೇಳೆ ಅವರು ಅಂಗವಿಕಲರಾದರೆ ಅವರಿಗೆ ಅಂಗವಿಕಲರ ಪಿಂಚಣಿ ನೀಡುವಂತೆ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶಿಸಿದೆ. ಆದರೂ ಅವರನ್ನು ಸುಪ್ರೀಂ ಕೋರ್ಟ್‌ಗೆ ಏಕೆ ಎಳೆದುತರಲಾಗುತ್ತದೆ' ಎಂದು ಪ್ರಶ್ನಿಸಿದೆ.
'ಈ ಬಗ್ಗೆ ನಿಯಮಗಳನ್ನು ರೂಪಿಸಲು ಸಿದ್ಧರಿರುವುದಾಗಿ ಹೇಳಿದ್ದೀರಿ. ಒಂದು ವೇಳೆ ಇಲ್ಲ ಎಂದಾದರೆ ನಿಮ್ಮ ಮೇಲ್ಮನವಿಯನ್ನು ಕ್ಷುಲ್ಲಕ ಎಂದು ಪರಿಗಣಿಸಿ ಭಾರಿ ಮೊತ್ತದ ದಂಡ ವಿಧಿಸಬೇಕಾಗುತ್ತದೆ' ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ನ್ಯಾಯಾಪೀಠ ತಾಕೀತು ಮಾಡಿದೆ.
ನಿವೃತ್ತ ರೇಡಿಯೊ ಫಿಟ್ಟರ್‌ಗೆ ಅಂಗವಿಕಲರ ಪಿಂಚಣಿ ನೀಡುವಂತೆ ನ್ಯಾಯಮಂಡಳಿಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.