ಮುಂದಿನ ನೂರು ವರ್ಷಗಳಲ್ಲಿ ಇತಿಹಾಸಕಾರರು ವಿಶ್ಲೇಷಣೆ ಮಾಡುವಾಗ, ಮನುಷ್ಯನಂತೆಯೇ ನಡೆಯುವ, ಮಾತನಾಡುವ, ಕೆಲಸ ಮಾಡುವ ಹಾಗೂ ಮನುಷ್ಯನಂತೆಯೇ ಕಾಣಿಸುವ ಹ್ಯೂಮನಾಯ್ಡ್‌ಗಳು ಹುಟ್ಟಿದ ಕಾಲ 2024 ಎಂದು ವ್ಯಾಖ್ಯಾನಿಸಬಹುದೇನೋ!
2024ನೇ ಇಸ್ವಿಯು ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಟೀರಿಯಲ್ ಮತ್ತು ವಿನ್ಯಾಸ - ಇವೆಲ್ಲವೂ ಒಂದು ಸುಧಾರಿತ ಹಂತವನ್ನು ತಲುಪಿದ ವರ್ಷ ಎಂದು ಹೇಳಲಾಗುತ್ತದೆ.
ಈಗಾಗಲೇ ಸಣ್ಣ ಸಣ್ಣ ಹ್ಯೂಮನಾಯ್ಡ್‌ಗಳು ಜನರ ಆಸಕ್ತಿಯನ್ನು ಕೆರಳಿಸುತ್ತಿವೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮುಂದಿನ ವರ್ಷ 'ಆಪ್ಟಿಮಸ್' ಎಂಬ ಹೆಸರಿನ ಒಂದು ಸಾವಿರ ಹ್ಯೂಮನಾಯ್ಡ್ ರೋಬಾಟ್‌ಗಳನ್ನು ಉತ್ಪಾದನೆ ಮಾಡುತ್ತೇನೆ ಎಂದಿದ್ದಾರೆ. ಒಂದು ಅಂದಾಜಿನ ಪ್ರಕಾರ, 2040ರ ವೇಳೆಗೆ ಮನುಷ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಹ್ಯೂಮನಾಯ್ಡ್‌ಗಳು ಇರುತ್ತವೆ!
ಹ್ಯೂಮನಾಯ್ಡ್‌ಗಳ ಅಗತ್ಯ ಉಂಟಾಗಿರುವುದೇ ಉದ್ಯಮಗಳಲ್ಲಿ. ಬಹುತೇಕ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸಗಾರರ ಕೊರತೆ ಇದೆ. ಸಾಮಾನ್ಯ ಕೆಲಸವನ್ನು ಮಾಡುವುದಕ್ಕೂ ಈ ಕಂಪನಿಗಳ ಬಳಿ ಕುಶಲ ಕೆಲಸಗಾರರಿಲ್ಲ. ಸಿಕ್ಕರೂ, ಅವರ ಕೂಲಿ ವೆಚ್ಚ ಹೆಚ್ಚಳವಾಗಿದೆ. ಅಂಥ ಕಡೆ ಈ ಹ್ಯೂಮನಾಯ್ಡ್‌ಗಳು ಕೆಲಸಕ್ಕೆ ಬರುತ್ತವೆ. ಈ ಹಿಂದೆ ಸಾಮಾನ್ಯ ಕೆಲಸ ಮಾಡುವುದಕ್ಕೂ ಹೆಣಗಾಡುತ್ತಿದ್ದ, ತೀರಾ ಸಣ್ಣ ಪುಟ್ಟ ಕೆಲಸಕ್ಕಷ್ಟೇ ಸೀಮಿತವಾಗಿದ್ದ ರೊಬಾಟ್‌ಗಳು ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಎಲ್‌ಎಲ್‌ಎಂ ಕಾರಣದಿಂದ ತುಂಬಾ ಸುಧಾರಣೆ ಕಂಡಿವೆ. ಸಂಕೀರ್ಣ ಕೆಲಸವನ್ನೂ ಸುಲಭವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಪಡೆದುಕೊಂಡಿವೆ.
ಏನಿದು ಹ್ಯೂಮನಾಯ್ಡ್?
ಸಾಮಾನ್ಯವಾಗಿ ಹ್ಯೂಮನಾಯ್ಡ್ ಎಂದರೆ ಮಾನವನಂತೆಯೇ ಹೋಲುವ ಒಂದು ರೊಬಾಟ್. ಇದಕ್ಕೆ ಕಾಲು, ಸೊಂಟ, ಕೈಗಳು ಮತ್ತು ತಲೆಯ ಆಕಾರ, ಮುಖದ ಆಕಾರ ಇರುತ್ತವೆ. ನಾವು 'ದಿ ಟರ್ಮಿನೇಟರ್'ನಂತಹ ಸಿನಿಮಾಗಳಲ್ಲಿ ಕಾಣುವ ರೋಬಾಟ್‌ಗಳನ್ನೇ ಇವು ಹೋಲುತ್ತವೆ. ಇವುಗಳ ಆಕಾರ ವಿಭಿನ್ನವಾಗಿರಬಹುದಷ್ಟೆ. ಬೋಸ್ಟನ್ ಡೈನಾಮಿಕ್ಸ್ ಅಭಿವೃದ್ಧಿಪಡಿಸಿದ ಅಟ್ಲಾಸ್ ರೋಬಾಟ್‌ಗೆ ಮುಖದ ರೂಪವಿದೆ. ಆದರೆ, ಅದರ ಮೇಲೆ ಕ್ಯಾಮೆರಾ ಇದೆ. ಹಾಂಕಾಂಗ್ ಮೂಲದ ಹ್ಯಾನ್ಸನ್ ರೋಬಾಟ್ಸ್ ಕಂಪನಿಯು ಸೋಫಿಯಾ ಮತ್ತು ಡೆಸ್ಡೆಮೋನಾ ಎಂಬ ಎರಡು ರೋಬಾಟ್‌ಗಳನ್ನು ನಿರ್ಮಾಣ ಮಾಡಿದ್ದು, ಯುಕೆ ಮೂಲದ ಇಂಜಿನಿಯರ್ಡ್ ಆರ್ಟ್ಸ್ ನಿರ್ಮಾಣ ಮಾಡಿದ ರೋಬಾಟ್‌ಗಳಿಗೂ ಮುಖಗಳಿವೆ.
ಈ ಹಿಂದೆ ರೋಬಾಟ್‌ಗಳನ್ನು ನಿರ್ಮಾಣ ಮಾಡುವಾಗ ಮನುಷ್ಯನ ಆಕಾರವನ್ನು ಕೊಡುವುದಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಮನುಷ್ಯನ ಆಕಾರವನ್ನು ಕೊಟ್ಟು ರೋಬಾಟ್‌ಗಳನ್ನು ಸಿದ್ಧಪಡಿಸುವಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿರುವುದು ಕಂಡುಬರುತ್ತಿದ್ದು, ಇದು ಇಡೀ ರೋಬಾಟಿಕ್ಸ್ ಉದ್ಯಮಕ್ಕೆ ಹೊಸ ಆಯಾಮವನ್ನು ನೀಡಿದೆ.
ರೋಬಾಟ್‌ಗಳ ಪರಿಕಲ್ಪನೆ ನಮಗೆ ಸೈನ್ಸ್ ಫಿಕ್ಷನ್ ಸಿನಿಮಾಗಳಲ್ಲಿ ಪರಿಚಯವಾಗಿದೆ. ಕಾಲ್ಪನಿಕವಾಗಿ, ಅದಕ್ಕೂ ಹಿಂದಿನಿಂದಲೇ ಕಥೆಗಳಲ್ಲಿ ನಾವು ಇವನ್ನು ನೋಡಿದ್ದೇವೆ. ಮಾನವ ನಾಗರಿಕತೆಗೆ ಒಗ್ಗಿಕೊಂಡಾಗಿನಿಂದಲೇ ಬಹುಶಃ ರೋಬಾಟ್‌ಗಳನ್ನು ರೂಪಿಸುವ ಪ್ರಯತ್ನ ನಡೆಸುತ್ತಿದ್ದಾನೆ. ಆದರೆ, ಅದರಲ್ಲಿ ಆ ಕಾಲದ ಲಭ್ಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಶಸ್ವಿಯಾಗಿದ್ದಾನೆ.
ಎಐ ಹೊಸ ಅಸ್ತ್ರ
ಎಐನಲ್ಲಿ ಕಳೆದ ಎರಡು ವರ್ಷಗಳಲ್ಲಿ ಅಪಾರ ಸುಧಾರಣೆಗಳಾಗಿವೆ. ಹಲವು ಕಂಪನಿಗಳು ಎಲ್‌ಎಲ್‌ಎಂಗಳನ್ನು ಅಭಿವೃದ್ಧಿಪಡಿಸಿದ್ದರಿಂದ ರೋಬಾಟ್‌ಗಳನ್ನು ಅಭಿವೃದ್ಧಿಪಡಿಸುವುದು ಸುಲಭವಾಗಿದೆ. ಅಷ್ಟೇ ಅಲ್ಲ, ರೋಬಾಟಿಕ್ಸನ್ನು ಒಂದು ಸರ್ವೀಸ್ ಆಗಿ ಅಭಿವೃದ್ಧಿಪಡಿಸುವ ಪ್ರಯತ್ನಕ್ಕೂ ವೇಗ ಸಿಕ್ಕಿದೆ. ಅಲ್ಲದೆ, ಹಲವು ಕಂಪನಿಗಳು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿವೆ.
ಚಿಪ್‌ಗಳನ್ನು ತಯಾರಿಸುವ ಎನ್‌ವಿಡಿಯಾ ಕೆಲವು ತಿಂಗಳುಗಳ ಹಿಂದೆ ರೋಬಾಟ್‌ಗಳಿಗೆ ಅಳವಡಿಸುವುದಕ್ಕೆಂದೇ ಚಿಪ್‌ಗಳನ್ನು ತಯಾರಿಸಲು ಪ್ರಾಜೆಕ್ಟ್ ಗ್ರೂಟ್ ಅನ್ನು ಆರಂಭಿಸಿದೆ. ಈ ಚಿಪ್‌ಗಳನ್ನು ಬಳಸಿದ ರೊಬಾಟ್‌ಗಳು ಮನುಷ್ಯರ ಜೊತೆಗೆ ಮನುಷ್ಯರಂತೆಯೇ ಸಂವಹನ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಹೇಳಲಾಗುತ್ತಿದೆ.
ಮನುಷ್ಯರಿಗೆ ಸಹಕಾರಿಯೋ ಪರ್ಯಾಯವೋ?:
ಈ ಚರ್ಚೆ ವೈಜ್ಞಾನಿಕ ಕಾದಂಬರಿ, ಕಥೆಗಳು ಹಾಗೂ ಚಲನಚಿತ್ರಗಳಲ್ಲೇ ಆಗಿದೆ. ಆದರೆ, ವಾಸ್ತವ ಚಿತ್ರಣ ಬಹುಶಃ ಅಲ್ಲಿಯವರೆಗೆ ನಮ್ಮನ್ನು ಎಳೆದು ತಂದಿಲ್ಲ. ಬಹುಶಃ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಈ ಕುರಿತ ಚರ್ಚೆ ತೀವ್ರ ಸ್ವರೂಪವನ್ನು ಪಡೆಯಬಹುದು. ಹಲವು ಕೆಲಸಗಳಲ್ಲಿ ಇದು ಮನುಷ್ಯನ ಕೆಲಸವನ್ನು ಕಿತ್ತುಕೊಳ್ಳಬಹುದು. ಇನ್ನು ಹಲವು ವಿಧಗಳಲ್ಲಿ ಮನುಷ್ಯನ ಜೊತೆಗಾರನ ರೀತಿಯಲ್ಲೂ ಕೆಲಸ ಮಾಡಬಹುದು.
ನಿಯಂತ್ರಣ ಯಾರದ್ದು?
ಹಲವು ದೇಶಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಕುಂಠಿತವಾಗಿದ್ದು, ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಜನಸಂಖ್ಯೆಯನ್ನು ಹೆಚ್ಚಿಸುವುದು ಹೇಗೆ ಎಂಬ ಬಗ್ಗೆ ದೇಶದ ನೀತಿನಿರೂಪಕರು ತಲೆಕೆಡಿಸಿಕೊಂಡಿದ್ದರೆ, ರೋಬಾಟಿಕ್ಸ್ ವಲಯದಲ್ಲಿರುವ ಕಂಪನಿಗಳು ಹೇಗೆ ರೋಬಾಟ್‌ಗಳ ಉತ್ಪಾದನೆಯನ್ನು ಹೆಚ್ಚಿಸುವುದು ಹೇಗೆ ಎಂಬುದಕ್ಕೆ ತಲೆಕೆಡಿಸಿಕೊಂಡಿವೆ. ಟೆಸ್ಲಾ ಮುಂದಿನ ವರ್ಷ ೊಂದು ಸಾವಿರ ಆಪ್ಟಿಮಸ್ ಅನ್ನು ಉತ್ಪಾದನೆ ಮಾಡುವ ಗುರಿ ಹಾಕಿಕೊಂಡಿದ್ದರೆ, ಅಮೆರಿಕದ ಒರೆಗಾನ್ ಮೂಲದ ಅಜಿಲಿಟಿ ರೋಬಾಟಿಕ್ಸ್ 2025ರಲ್ಲಿ ಹತ್ತು ಸಾವಿರ ರೋಬಾಟ್‌ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿರುವ ಫ್ಯಾಕ್ಟರಿಯನ್ನು ಸ್ಥಾಪಿಸಿದೆ. ಇಲ್ಲಿ ಯಾರು ಎಷ್ಟು ಹೆಚ್ಚು ರೋಬಾಟ್‌ಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಎಂಬುದನ್ನು ಆಧರಿಸಿ ರೋಬಾಟಿಕ್ಸ್‌ನಲ್ಲಿ ಹೆಚ್ಚು ಪ್ರಾಬಲ್ಯವನ್ನು ಸಾಧಿಸುತ್ತಾರೆ ಎಂಬ ಅಂಶ ಅಡಗಿದೆ!