ಕಾಸರಗೋಡು: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೇರಳ ರಾಜ್ಯ ಸಂಚಾಲಕರಾಗಿ ಕಾಸರಗೋಡು ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆ ತಾಲೂಕುಗಳಲ್ಲಿ ತನ್ನ ಘಟಕವನ್ನು ಹೊಂದಿ, ಕನ್ನಡ ಸಾಹಿತ್ಯಾಭಿಮಾನ, ಭಾಷಾಭಿಮಾನ, ಬೆಳೆಸಿ, ಪುಸ್ತಕ ದಾಸೋಹ ಮೂಲಕ ಸುಮಾರು ಮೂರು ಲಕ್ಷ ಪುಸ್ತಕ ವಿತರಿಸಿ, ಇಡೀ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆದ ಸ್ಥಾನ ಮಾನ, ಜನಮನ್ನಣೆ ಗಳಿಸುತ್ತಿರುವ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್, ಇದೀಗ ಕೇರಳ ರಾಜ್ಯದಲ್ಲಿ ತನ್ನ ಕನ್ನಡ ಪರ ಚಟುವಟಿಕೆಯನ್ನು ವಿಸ್ತರಿಸಲು ಮುಂದಾಗಿದೆ.
ಮನೆಯನ್ನೇ ಕನ್ನಡ ಭವನವಾಗಿಸಿ, ಕನ್ನಡ ಭವನ ಗ್ರಂಥಾಲಯ, ಕನ್ನಡ ಭವನ ಸಾರ್ವಜನಿಕ ವಾಚನಾಲಯವನ್ನಾಗಿಸಿ ನಿರಂತರ ಕನ್ನಡ ಪರ ಚಟುವಟಿಕೆಗಳಿಂದ ಕೇರಳ -ಕರ್ನಾಟಕ ರಾಜ್ಯಗಳಲ್ಲಿ ಮನೆ ಮಾತಾಗಿರುವ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಇವರನ್ನು ಕೇರಳ ರಾಜ್ಯ ಸಂಚಾಲಕರನ್ನಾಗಿ ನಿಯಮಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಘಟಕ ಸ್ಥಾಪಿಸಿ ಅಲ್ಲಿ ಸೂಕ್ತ ಅಧ್ಯಕ್ಷರ ಆಯ್ಕೆ ಜತೆಗೆ ಕೇರಳ ರಾಜ್ಯದಲ್ಲಿ ಸಂಘ ಸಂಸ್ಥೆಗಲಿರುವ ಪ್ರದೇಶಗಳಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಆಯೋಜಿಸಲೂ ಸೂಚಿಸಲಾಗಿದೆ. ಸಾಹಿತ್ಯ, ಕಲೆ, ಕನ್ನಡ ಸಂಸ್ಕøತಿ, ನಾಡು-ನುಡಿ, ಪುಸ್ತಕ ಪ್ರೀತಿ, ಪುಸ್ತಕ ದಾಸೋಹ, ಕವಿಮನಸ್ಸು -ಸವಿಮನಸ್ಸು ಗಳನ್ನು ಪ್ರೋತ್ಸಾಹಿಸಿ ಸಂಸ್ಥೆಯನ್ನು ಜನಪ್ರಿಯಗೊಳಿಸುವ ಬಗ್ಗೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ, ಹುಬ್ಬಳ್ಳಿ ಸಂಸ್ಥಾಪಕ ಅಧ್ಯಕ್ಷ ಕೃಷ್ಣ ಮೂರ್ತಿ ಕುಲಕರ್ಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.