ಭೋಪಾಲ್ : ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ತ್ಯಾಜ್ಯ ವಿಲೇವಾರಿಗೆ ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ 6 ವಾರ ಕಾಲಾವಕಾಶ ನೀಡಿದೆ.
ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರವೇ ತ್ಯಾಜ್ಯ ವಿಲೇವಾರಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ಈ ವಿಷಯದಲ್ಲಿ ತಪ್ಪು ಮಾಹಿತಿ ನೀಡದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ.
ಭೋಪಾಲ್‌ನಲ್ಲಿನ ಇದೀಗ ನಿಷ್ಕ್ರಿಯಗೊಂಡಿರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸುರಕ್ಷಿತವಾಗಿ ಮುಚ್ಚಲ್ಪಟ್ಟ 12 ಕಂಟೇನರ್‌ಗಳಲ್ಲಿ ತ್ಯಾಜ್ಯವನ್ನು ವಿಲೇವಾರಿಗಾಗಿ 250 ಕಿ.ಮೀ. ದೂರದ ಧಾರ್ ಜಿಲ್ಲೆಯ ಪೀಥಂಪುರಕ್ಕೆ ಜ. 2ರಂದು ತರಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಕೈಟ್ ಮತ್ತು ನ್ಯಾಯಮೂರ್ತಿ ವಿವೇಕ್ ಜೈನ್ ಅವರಿದ್ದ ವಿಭಾಗೀಯ ಪೀಠವು ತ್ಯಾಜ್ಯ ವಿಲೇವಾರಿಗೂ ಮುನ್ನ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜೊತೆಗೆ ಅವರ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸಲು ರಾಜ್ಯ ಸರ್ಕಾರಕ್ಕೆ ಸಮಯ ನೀಡಿತು.