ಮಹಾಕುಂಭ ನಗರ (PTI): ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಲಕ್ಷಾಂತರ ಸಂಖ್ಯೆಯ ಜನರು ಬುಧವಾರವೂ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಈ ವೇಳೆ ಭಕ್ತರಿಂದ 'ಹರಹರ ಮಹಾದೇವ್', 'ಜೈ ಶ್ರೀರಾಮ್', 'ಜೈ ಗಂಗಾ ಮೈಯ್ಯ' ಘೋಷಣೆಗಳು ಮೊಳಗಿದವು.
ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ ಮಹಾಕುಂಭದಲ್ಲಿ ಭಾಗಿಯಾಗಿದ್ದ 3.5 ಕೋಟಿಗೂ ಹೆಚ್ಚು ಜನರು ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮ ತಾಣದಲ್ಲಿ ಪುಣ್ಯ ಸ್ನಾನ ಮಾಡಿದ್ದರು.
ದೇಶದ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಬಂದಿದ್ದ ಹೆಚ್ಚಿನ ಸಂಖ್ಯೆಯ ಭಕ್ತರು ಬುಧವಾರ ತೀವ್ರ ಚಳಿಯಲ್ಲೂ ಸಂಗಮದಲ್ಲಿ ಮಿಂದೆದ್ದರು. 10 ದೇಶಗಳ 21 ಜನರಿಂದ ಗುರುವಾರ ಪವಿತ್ರ ಸ್ನಾನ:
ಫಿಜಿ, ಫಿನ್ಲೆಂಡ್, ಗಯಾನಾ, ಮಲೇಷ್ಯಾ, ಮಾರಿಷಸ್, ಸಿಂಗಪುರ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್, ಟೊಬಾಗೊ ಮತ್ತು ಯುಎಇ ದೇಶಗಳ 21 ಪ್ರತಿನಿಧಿಗಳು ಬುಧವಾರ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದಾರೆ. ಅವರೆಲ್ಲ ಗುರುವಾರ ಬೆಳಿಗ್ಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ನಿಯೋಗಕ್ಕೆ ಆಹ್ವಾನ ನೀಡಿದೆ.
ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಉತ್ತರಾಖಂಡ ಮೂಲದ ನಿರೂಪಕಿ, ಸಾಮಾಜಿಕ ಕಾರ್ಯಕರ್ತೆ ಹರ್ಷ ರಿಚಾರಿಯಾ ಅವರು ಸಾಧುಗಳ ಜತೆ ಕಂಡು ಬಂದಿದ್ದರು.
ಹಳದಿ ಉಡುಗೆ ಮತ್ತು ರುದ್ರಾಕ್ಷಿ ಜಪಮಾಲೆ ಧರಿಸಿದ್ದ ರಿಚಾರಿಯಾ ಅವರು ಆರಂಭದಲ್ಲಿ ಯುವ ಸಾಧ್ವಿಯಾಗಿ ಗಮನ ಸೆಳೆದಿದ್ದರು. ಅವರ ಚಿತ್ರಗಳು, ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು 'ಬ್ಯೂಟಿಫುಲ್ ಸಾದ್ವಿ' ಎಂದು ಉಲ್ಲೇಖಿಸಲ್ಪಟ್ಟಿದ್ದಾರೆ.
'ಮಹಾಕುಂಭವು ಧರ್ಮದ ಪ್ರದರ್ಶನವಲ್ಲ. ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವಂತಹ ಈ ರೀತಿಯ ಪ್ರದರ್ಶನಗಳನ್ನು ಸಂತರು ತಪ್ಪಿಸಬೇಕು' ಎಂದು ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ ಸ್ವರೂಪ್ ಮಹಾರಾಜ್ ಬುಧವಾರ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ರಿಚಾರಿಯಾ, 'ನಾನು ಸಾಧ್ವಿ ಅಲ್ಲ, ಹಾಗೆಂದು ಎಲ್ಲೂ ಹೇಳಿಕೊಂಡೂ ಇಲ್ಲ. ಮಂತ್ರ ದೀಕ್ಷೆಯನ್ನು ಮಾತ್ರ ತೆಗೆದುಕೊಂಡಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.