ಗೋರಖಪುರ: ಉತ್ತರ ಪ್ರದೇಶ ಸರ್ಕಾರವು ಗೋರಖಪುರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಶುಕ್ರವಾರ ಹೇಳಿದ್ದಾರೆ.
ಇಲ್ಲಿನ ಭಾತಿ ವಿಹಾರ್ ಕಾಲೊನಿಯಲ್ಲಿ ಗೋರಖ್‌ಪುರದ ಮೊದಲ ಮಿನಿ ಕ್ರೀಡಾ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶ ಸರ್ಕಾರವು ಕ್ರೀಡೆಯನ್ನು ಉತ್ತೇಜಿಸಲು ಮತ್ತು ರಾಜ್ಯದೊಳಗಿನ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಬದ್ಧವಾಗಿದೆ ಎಂದು ಹೇಳಿದರು.
ಪ್ರತಿ ಗ್ರಾಮಗಳಲ್ಲಿ ಕ್ರೀಡಾ ಮೈದಾನಗಳನ್ನು ನಿರ್ಮಿಸಲಾಗುತ್ತಿದ್ದು, ಬ್ಲಾಕ್ ಮಟ್ಟದಲ್ಲಿ ಮಿನಿ ಕ್ರೀಡಾಂಗಣ ಹಾಗೂ ಜಿಲ್ಲಾ ಮಟ್ಟದಲ್ಲಿ ಪೂರ್ಣ ಪ್ರಮಾಣದ ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಹಾಗೂ ಭೂಮಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕ್ರೀಡೆ ಹಾಗೂ ಆಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೂರಲ್ ಸ್ಪೋರ್ಟ್ಸ್ ಲೀಗ್ ಆರಂಭಿಸಿದ್ದು, ಯುವಕ ಮಂಗಳ ದಳ ಹಾಗೂ ಮಹಿಳಾ ಮಂಗಳ ದಳಗಳ ಮೂಲಕ ಗ್ರಾಮಗಳಲ್ಲಿ ಕ್ರೀಡಾ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು.