ಮುಳ್ಳೇರಿಯ: ಕಾರಡ್ಕ ಬ್ಲಾಕ್ ಪಂಚಾಯಿತಿ ನೇತೃತ್ವದಲ್ಲಿ ಜನವರಿ 4 ರಿಂದ 12 ರವರೆಗೆ ನಡೆಯಲಿರುವ 'ಫೇಮ್-2025' (ಎಫ್‍ಎಎಂಇ-ಫಾರ್ಮರ್ಸ್ ಅಗ್ರಿಕಲ್ಚರ್ ಮಾರ್ಕೆಟಿಂಗ್ ಎಕ್ಸ್‍ಪೋ) ಗಾಗಿ ಸಿದ್ಧತೆ ಪೂರ್ಣಗೊಂಡಿರುವುದಾಗಿ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಪೊವ್ವಲ್ ಬೆಂಚ್‍ಕೋರ್ಟ್ ವಠಾರದಲ್ಲಿ ಕಾರಡ್ಕ ಬ್ಲಾಕ್‍ಪಂಚಾಯಿತಿ ಮೈದಾನದಲ್ಲಿ ಎಕ್ಸ್‍ಪೋ ಮೇಳ ಹಾಗೂ ಕೃಷ್ಯುತ್ಪನ್ನ ಪ್ರದರ್ಶನ ಹಾಗೂ ಮಾರಾಟ ನಡೆಯುವುದು. ಜ.
4ರಂದು ಸಂಜೆ 4ಕ್ಕೆ ಕ್ರೀಡಾ ಸಚಿವ ವಿ ಅಬ್ದುಲ್ ರೆಹಮಾನ್ ಮೇಳ ಉದ್ಘಾಟಿಸುವರು. ಕೃಷಿ ಮತ್ತು ಕೃಷಿಯೇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 100 ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ವಿಭಿನ್ನ ವಿಷಯಗಳನ್ನು ಆಧರಿಸಿದ ಸೆಮಿನಾರ್‍ಗಳು ಮತ್ತು ತರಗತಿಗಳನ್ನು ಪ್ರತಿದಿನ ಆಯೋಜಿಸಲಾಗುವುದು. ಕೃಷಿ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಅಂಗವಾಗಿ ಕೃಷಿಕ ಪ್ರಶಸ್ತಿ ನೀಡಲಾಗುವುದು. ಜಿಲ್ಲೆಯಲ್ಲೇ ಅತಿ ದೊಡ್ಡ ಅಗ್ರಿಫೆಸ್ಟ್ ಮಾಡಲು ಸಂಘಟಕರು ಸಜ್ಜಾಗಿದ್ದಾರೆ. ಚೆರ್ಕಳ-ಜಾಲ್ಸೂರು ರಾಜ್ಯ ಹೆದ್ದಾರಿಯ ಪೊವ್ವಲ್ ಸನಿಹದ ಮೈದಾನದಲ್ಲಿ ಮೇಳ ಆಯೋಜಿಸಲಾಗಿದೆ.
ಸಿಪಿಸಿಆರ್‍ಐ ಕೃಷಿ ಇಲಾಖೆ, ಹೈನುಗಾರಿಕೆ ಇಲಾಖೆ, ಕೈಗಾರಿಕೆ ಇಲಾಖೆ, ಪ್ಲಾಂಟೇಶನ್, ಪಶುಸಂಗೋಪನೆ, ಅರಣ್ಯ ಮತ್ತು ವನ್ಯಜೀವಿ, ಕುಟುಂಬಶ್ರೀ ಹೀಗೆ ವಿವಿಧ ಕೃಷಿ ಮತ್ತು ಕೃಷಿಯೇತರ ವಲಯಗಳಲ್ಲಿ ಸರ್ಕಾರ, ಸರ್ಕಾರೇತರ ಮಳಿಗೆಗಳು ಪಾಲ್ಗೊಳ್ಳಲಿದೆ.
ಹಗಲಿನಲ್ಲಿ ವಿವಿಧ ತರಗತಿ, ಸಂಜೆ ವಿಚಾರ ಸಂಕಿರಣ ಮತ್ತು ಸಂಜೆ ಕಲಾ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಉದ್ಯಮಶೀಲತೆಯ ಅವಕಾಶಗಳು, ಆಧುನಿಕ ಅಣಬೆ ಕೃಷಿ, ಜೇನುಸಾಕಣೆಯ ಮೂಲಕ ಉತ್ಪಾದನೆ ಹೆಚ್ಚಳ, ರಸಗೊಬ್ಬರ ಬಳಕೆ ಮತ್ತು ಕೀಟ ನಿರ್ವಹಣೆಯ ಆಧುನಿಕ ವಿಧಾನಗಳಂತಹ ವಿವಿಧ ವಿಷಯಗಳ ಕುರಿತು ತರಗತಿಗಳು ನಡೆಯಲಿದೆ. ಪ್ರಮುಖ ಪುಸ್ತಕ ಪ್ರಕಾಶಕರಿಂದ ಪುಸ್ತಕೋತ್ಸವ ನಡೆಯಲಿದೆ ಎಂದು ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್, ಬಿಡಿಒ. ಪ್ರಭಾರಿ ಎನ್.ಎ.ಮಜೀದ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.