ಹೈದರಾಬಾದ್: ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ 'ವೈಕುಂಠ ದ್ವಾರ ದರ್ಶನ'ದ ಟಿಕೆಟ್ ಪಡೆದುಕೊಳ್ಳುವಾಗ ಉಂಟಾದ ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಶುಕ್ರವಾರ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಿತ್ತು.
ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸೂಚನೆಯಂತೆ ಟಿಟಿಡಿ ಅಧಿಕಾರಿಗಳು, ಕಾಲ್ತುಳಿತ ಘಟನೆಯಲ್ಲಿ ಗಾಯಗೊಂಡವರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಿದ್ದಾರೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.
ಘಟನೆಯಲ್ಲಿ ಗಾಯಗೊಂಡು ಚೇತರಿಕೆ ಕಂಡ ಭಕ್ತಾದಿಗಳು ಇಂದು ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಬಳಿಕ ಜಿಲ್ಲಾಡಳಿತ ಅವರನ್ನು ಮನೆಗಳಿಗೆ ಕಳುಹಿಸಲು ವಾಹನ ವ್ಯವಸ್ಥೆ ಸಹ ಮಾಡಿತ್ತು ಎಂದು ಟಿಟಿಡಿ ಹೇಳಿದೆ.
ಶ್ರೀವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಎಸ್‌ವಿಐಎಂಎಸ್) ಚಿಕಿತ್ಸೆ ಪಡೆದ 32 ಗಾಯಾಳುಗಳು ಬಿಡುಗಡೆಗೊಂಡರು. ಇನ್ನೂ ಐದು ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಾಳೆ ಬಿಡುಗಡೆಗೊಳ್ಳಬಹುದು ಎಂದು ತಿಳಿದು ಬಂದಿದೆ.
ಶುಕ್ರವಾರ ವೈಕುಂಠ ಏಕಾದಶಿಯ ಪ್ರಯುಕ್ತ ವೆಂಕಟೇಶ್ವರನಿಗೆ ವಿಶೇಷ ಪೂಜಾ- ಪ್ರಾರ್ಥನೆ ಸಲ್ಲಿಸಲಾಗಿದೆ. ಇಡೀ ತಿರುಮಲ 'ಗೋವಿಂದಾ... ಗೋವಿಂದಾ' ಎಂಬ ದಿವ್ಯ ಘೋಷಗಳೊಂದಿಗೆ ಮೊಳಗಿತ್ತು ಎಂದು ಟಿಟಿಡಿ ಪ್ರಕಟಣೆಯಲ್ಲಿ ತಿಳಿಸಿದೆ.
ವೈಕುಂಠ ದ್ವಾರ ದರ್ಶನವು ಜನವರಿ 10ರಿಂದ 10 ದಿನಗಳವರೆಗೆ ಇರಲಿದೆ. ಇದಕ್ಕಾಗಿ ದೇಶದ ವಿವಿಧೆಡೆಗಳಿಂದ ಸಾವಿರಾರು ಭಕ್ತಾರು ಬರುತ್ತಾರೆ.
ತಿರುಪತಿಯ ಎಂಜಿಎಂ ಶಾಲೆ ಬಳಿಯ ಬೈರಾಗಿ ಪಟ್ಟೇಡ ಬಳಿ ಬುಧವಾರ ರಾತ್ರಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್‌ಗಾಗಿ ನೂರಾರು ಭಕ್ತರು ಮುಗಿಬಿದ್ದು ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ಆರು ಭಕ್ತರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.