ಚೆನ್ನೈ: ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಗಾಗಿ ಮಹಿಳಾ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಮದ್ರಾಸ್ ಹೈಕೋರ್ಟ್ ಗುರುವಾರ ನೇಮಿಸಿದೆ.
ಪೊಲೀಸರು ಪ್ರಕರಣದ ಮಾಹಿತಿಯನ್ನು ಹಸ್ತಾಂತರಿಸಿದ ನಂತರ ಡಾ.ಭುಕ್ಯಾ ಸ್ನೇಹ ಪ್ರಿಯಾ, ಅಯ್ಮಾನ್ ಜಮಲ್ ಮತ್ತು ಎಸ್.ಬೃಂದಾ ಅವರ ತಂಡವು ತನಿಖೆ ಆರಂಭಿಸಿತು.
'ತನಿಖಾ ತಂಡವು ಗುರುವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿತು ಮತ್ತು ಸಂತ್ರಸ್ತೆಯೊಂದಿಗೆ ಮಾತುಕತೆ ನಡೆಸಿತು' ಎಂದು ಮೂಲಗಳು ತಿಳಿಸಿವೆ.
ವಿಚಾರಣೆ ಸಂರ್ಭದಲ್ಲಿ ಕೋರ್ಟ್, ಪ್ರಕರಣವನ್ನು ರಾಜಕೀಯಗೊಳಿಸಿದ ವಿಚಾರವಾಗಿ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿತು.
ರಾಜಕೀಯ ಪಕ್ಷಗಳು ಮಾಧ್ಯಮಗಳ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತವೆಯೇ ಹೊರತು, ಸಮಾಜದ ಮೇಲಿನ ಕಾಳಜಿಯಿಂದಲ್ಲ ಎಂದು ನ್ಯಾಯಮೂರ್ತಿ ಪಿ.ವೇಲಮುರುಗನ್ ಅವರು ಅಭಿಪ್ರಾಯಪಟ್ಟರು.
'ಸಂತ್ರಸ್ತೆಯು ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡುವ ಧೈರ್ಯ ತೋರಿದಾಗಿನಿಂದ ಮಾಧ್ಯಮಗಳೇ ಪ್ರಕರಣದ 'ವಿಚಾರಣೆ' ನಡೆಸುವ ದಾಟಿಯಲ್ಲಿ ವರದಿಗಳನ್ನು ಪ್ರಕಟಿಸುತ್ತಿವೆ' ಎಂದು ಬೇಸರಿಸಿದರು.