ವಾಷಿಂಗ್ಟನ್: ಸದ್ಯಕ್ಕೆ ಸಾರ್ವಜನಿಕ ಜೀವನ ತೊರೆಯುವುದಿಲ್ಲ ಎಂದು ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ಇನ್ನು 10 ದಿನ ಬಾಕಿ ಇದ್ದು, ಈ ವೇಳೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ನಾನು ಕಣ್ಮರೆಯಾಗುವುದಿಲ್ಲ. ಯಾರ ಮನಸ್ಸಿನಿಂದ ಮರೆಯಾಗುವುದಿಲ್ಲ' ಎಂದು ಅವರು ಇಲ್ಲಿನ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
'ಅಧ್ಯಕ್ಷೀಯ ಅವಧಿಯ ಬಳಿಕ ಯಾವ ಜವಾಬ್ದಾರಿ ನಿಭಾಯಿಸುತ್ತೀರಿ? ವಾಷಿಂಗ್ಟನ್ ತೊರೆದ ಬಳಿಕದ ನಿಮ್ಮ ಯೋಜನೆಗಳೇನು? ಜಾರ್ಜ್ ಬುಷ್‌ರವರ ಹಾಗೆ ತೆರೆಮರೆಗೆ ಸರಿಯುವಿರಾ? ಎನ್ನುವ ಪತ್ರಕರ್ತರ ಪ್ರಶ್ನೆಗೆ 82 ವರ್ಷದ ಬೈಡನ್ ಉತ್ತರಿಸಿದ್ದಾರೆ.
ಸಾಮಾನ್ಯವಾಗಿ ಅವಧಿ ಮುಗಿದ ಬಳಿಕ ಅಮೆರಿಕದ ಅಧ್ಯಕ್ಷರಾದವರೆಲ್ಲಾ ಸಾರ್ವಜನಿಕ ಜೀವನದಿಂದ ದೂರ ಉಳಿಯುತ್ತಾರೆ. ಆದರೆ ತಾನು ಸಾರ್ವಜನಿಕ ಜೀವನದಲ್ಲಿಯೇ ಮುಂದುವರಿಯುವುದಾಗಿ ಬೈಡನ್ ಹೇಳಿದ್ದಾರೆ. ಆದರೆ ಮುಂದಿನ ಯೋಜನೆಗಳು ಏನು ಎನ್ನುವುದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜೋ ಬೈಡನ್ ಅವರಿಗಿಂತ ಮುಂಚೆ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ಅವಧಿಯ ಅಧ್ಯಕ್ಷೀಯ ಅವಧಿ ಬಳಿಕ ಸಾರ್ವಜನಿಕ ಜೀವನದಿಂದ ದೂರವಾಗಿದ್ದರು. ಅಪರೂಪಕ್ಕೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. 2009-2017ರ ಎರಡು ಅವಧಿಗೆ ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದರು. ಈ ವೇಳೆ ಜೋ ಬೈಡನ್ ಉಪಾಧ್ಯಕ್ಷರಾಗಿದ್ದರು.
ಜನವರಿ 20 ರಂದು ಬೈಡನ್ ಅವರ ಅಧ್ಯಕ್ಷೀಯ ಅವಧಿ ಮುಗಿಯಲಿದ್ದು, 78 ವರ್ಷದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ಹಸ್ತಾಂತರ ನಡೆಯಲಿದೆ.