ನವದೆಹಲಿ: ದೇಶದ ಪ್ರತಿಯೊಬ್ಬ ನಾಗರಿಕನೂ ಒಬ್ಬೊಬ್ಬ ಯೋಧನಿಗೆ ಸಮಾನ. ಸಮವಸ್ತ್ರ ಧರಿಸಿ ದೇಶ ಸೇವೆ ಮಾಡುವ ಅನುಭವವೇ ಬೇರೆ. ಆದರೆ, ಸೇನಾ ಸಮವಸ್ತ್ರ ಧರಿಸದೆಯೂ ದೇಶ ಸೇವೆ ಮಾಡಬಹುದು. ದೇಶಭಕ್ತಿಯು ಸಮವಸ್ತ್ರದಲ್ಲಿರುವವರಿಗೆ ಮಾತ್ರ ಸೀಮಿತವಾಗಿಲ್ಲ ಎಂದು ಭಾರತೀಯ ವಾಯುಸೇನೆ ಮುಖ್ಯಸ್ಥ ಎ.ಪಿ.ಸಿಂಗ್ ಬುಧವಾರ ಹೇಳಿದ್ದಾರೆ.
ದೆಹಲಿ ಕಂಟೋನ್ಮೆಂಟ್‌ನಲ್ಲಿ ನಡೆಯುತ್ತಿರುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಗಣರಾಜ್ಯೋತ್ಸವ ಶಿಬಿರದಲ್ಲಿ ಸಿಂಗ್ ಮಾತನಾಡಿದ್ದಾರೆ. ವಿವಿಧ ಹಿನ್ನೆಲೆಯುಳ್ಳವರು ಒಂದೆಡೆ ಸೇರುವ ಮೂಲಕ ದೇಶದ ಮೂಲತತ್ವವನ್ನು (ವಿವಿಧತೆಯಲ್ಲಿ ಏಕತೆಯನ್ನು) ಅನುಸರಿಸಲು ಶಿಬಿರವು ವೇದಿಕೆಯಾಗಿದೆ ಎಂದಿದ್ದಾರೆ.
ಎನ್‌ಸಿಸಿ ಹಾಗೂ ಗಣರಾಜ್ಯೋತ್ಸವ ಶಿಬಿರದಲ್ಲಿ ತರಬೇತಿ ಪಡೆಯುತ್ತಿರುವ ಯುವ ಮನಸ್ಸುಗಳು, ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಸಾಕಷ್ಟು ಕೆಡೆಟ್‌ಗಳು ಸೇನಾಪಡೆಗಳನ್ನು ಸೇರುವ ಬಯಕೆ ವ್ಯಕ್ತಪಡಿಸಿದ್ದೀರಿ. ಸಮವಸ್ತ ಧರಿಸಿ ದೇಶ ಸೇವೆ ಮಾಡುವ ಅನುಭವ ಅದ್ಭುತವಾದದ್ದು. ಆದರೆ, ದೇಶ ಸೇವೆ ಮಾಡಲು ಬಯಸುವವರಿಗೆ ಸಮವಸ್ತ್ರದ ಅಗತ್ಯವಿಲ್ಲ. ಅದನ್ನು ನಾವೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕು' ಎಂದು ಸಿಂಗ್ ಕಿವಿಮಾತು ಹೇಳಿದ್ದಾರೆ.
'ದೇಶ ಸೇವೆ ಮಾಡಬೇಕೆನ್ನುವ ಭಾವನೆ ಹಾಗೂ ದೇಶಭಕ್ತಿಯು ಸಮವಸ್ತ್ರದಲ್ಲಿರುವವರಿಗೆ ಮಾತ್ರ ಸೀಮಿತವಾಗಿಲ್ಲ. ಅದು ದೇಶದ ಪ್ರತಿಯೊಬ್ಬರಲ್ಲಿಯೂ ಅಡಗಿದೆ' ಎಂದು ತಿಳಿಸಿದ್ದಾರೆ.
'ಪ್ರತಿಯೊಬ್ಬ ಯೋಧನೂ ಸಮವಸ್ತ್ರದಲ್ಲಿರುವ ನಾಗರಿಕ ಮತ್ತು ಪ್ರತಿಯೊಬ್ಬ ನಾಗರಿಕನೂ ಸಮವಸ್ತ್ರದಲ್ಲಿ ಇಲ್ಲದ ಸೇನಾನಿ ಎಂದು ಕೆಲವರು ಹೇಳುತ್ತಾರೆ. ಅದೇ ರೀತಿ, ಪ್ರತಿಯೊಬ್ಬ ನಾಗರಿಕನೂ ಯೋಧನಾಗಿದ್ದು, ದೇಶದ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸಬೇಕು' ಎಂದು ಕರೆ ನೀಡಿದ್ದಾರೆ.
'ಸಮವಸ್ತ್ರ ಧರಿಸಿದ್ದೇವೆಯೇ, ಇಲ್ಲವೇ ಎಂಬುದು ಮುಖ್ಯವಲ್ಲ. ನಾವೆಲ್ಲರೂ ದೇಶ ಸೇವೆ ಮಾಡಬಹುದು. ಭವಿಷ್ಯದಲ್ಲಿ ನೀವು ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ, ಇಲ್ಲಿ ಕಲಿಯುವ ಮೌಲ್ಯಗಳು, ಜೀವನದುದ್ದಕ್ಕೂ ನಿಮ್ಮನ್ನು ಮುನ್ನಡೆಸಲಿವೆ' ಎಂದು ವಿಶ್ವಾಸದಿಂದ ಹೇಳಿದ್ದಾರೆ.
ಡಿಸೆಂಬರ್ 30ರಂದು ಆರಂಭವಾಗಿರುವ ಗಣರಾಜ್ಯೋತ್ಸವ ಶಿಬಿರದಲ್ಲಿ, ಎನ್‌ಸಿಸಿಯ ಒಟ್ಟು 2,361 ಕೆಡೆಟ್‌ಗಳು ಪಾಲ್ಗೊಂಡಿದ್ದಾರೆ. ಈ ಪೈಕಿ 917 ಬಾಲಕಿಯರಿದ್ದಾರೆ. ಜನವರಿ 27ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಯೊಂದಿಗೆ ಶಿಬಿರ ಮುಕ್ತಾಯವಾಗಲಿದೆ.