ನವದೆಹಲಿ: ಸಂಸತ್ತಿನ ಸ್ಥಾಯಿ ಸಮಿತಿಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ದೂರಿದೆ. ಬಿಜೆಪಿಯ 26 ಸಂಸದರು ಎರಡು ಸಮಿತಿಗಳ ಸದಸ್ಯರಾಗಿದ್ದು, ಇದು ಪರಂಪರಾಗತವಾಗಿ ಪಾಲಿಸಿಕೊಂಡು ಬಂದ 'ಓರ್ವ ಸಂಸದ, ಒಂದು ಸ್ಥಾಯಿ ಸಮಿತಿ' ನಿಯಮಕ್ಕೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
1990ರ ಮಧ್ಯದಲ್ಲಿ ಸ್ಥಾಯಿ ಸಮಿತಿಗಳನ್ನು ರಚಿಸಿದ ಬಳಿಕ 'ಓರ್ವ ಸಂಸದ, ಒಂದು ಸ್ಥಾಯಿ ಸಮಿತಿ' ಸಂಪ್ರದಾಯವನ್ನು ಪಾಲಿಸಲಾಗಿತ್ತು ಎಂದು ಕಾಂಗ್ರೆಸ್‌ನ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.
'ಈಗ ಬಿಜೆಪಿಯ 26 ಸಂಸದರು 2 ಸ್ಥಾಯಿ ಸಮಿತಿಗಳ ಸದಸ್ಯರಾಗಿದ್ದಾರೆ. ಇದು ಸ್ಥಾಯಿ ಸಮಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಬಿಜೆಪಿಯ ಧೋರಣೆಯ ಪ್ರತೀಕ' ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಒಟ್ಟು 24 ಇಲಾಖಾವಾರು ಸ್ಥಾಯಿ ಸಮಿತಿಗಳಿದ್ದು, ಈ ಪೈಕಿ 11 ಸಮಿತಿಗೆ ಬಿಜೆಪಿ ಹಾಗೂ 4 ಸಮಿತಿಗೆ ಮಿತ್ರ ಪಕ್ಷಗಳು ಸದಸ್ಯರು ಮುಖ್ಯಸ್ಥರಾಗಿದ್ದಾರೆ. 4 ಸಮಿತಿಗಳಿಗೆ ಕಾಂಗ್ರೆಸ್, ತಲಾ 2ಕ್ಕೆ ಟಿಎಂಸಿ ಹಾಗೂ ಡಿಎಂಕೆ, 1 ಸಮಿತಿಗೆ ಸಮಾಜವಾದಿ ಪಕ್ಷದ ಸಂಸದರು ಮುಖ್ಯಸ್ಥರಾಗಿದ್ದಾರೆ.