ಮುಳ್ಳೇರಿಯ: ಮುಳ್ಳೇರಿಯ ಕೊಟ್ಟಂಗುಳಿಯ ಒಯಕ್ಕಾಳ್ ನಿವಾಸಿ ವಿನೋದ್ ಎಂಬವರ ಮನೆಯ ಸಾಕು ನಾಯಿಯನ್ನು ಗುರುವಾರ ನಸುಕಿಗೆ ಚಿರತೆ ಆಕ್ರಮಿಸಿದೆ. ಈ ಸಂದರ್ಭ ಜೀವಭಯದಿಂದ ನಾಯಿ ಕೂಗಾಡಲಾರಂಭಿಸಿದಾಗ ಎಚ್ಚೆತ್ತ ಮನೆಯವರು ಟಾರ್ಚ್ ಬೆಳಕು ಹಾಯಿಸಿದಾಗ ಚಿರತೆ ಅಮಗಳದಿಂದ ಆಚೆಗೆ ಓಡಿ ಪರಾರಿಯಾಗುತ್ತಿರುವುದನ್ನು ಕಂಡಿದ್ದರು. ತಿಂಗಳ ಹಿಂದೆ ಇದೇ ನಾಯಿಯ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಕತ್ತಿನ ಭಾಗಕ್ಕೆ ಗಂಭೀರ ಗಾಯಗಳುಂಟಾಗಿತ್ತು.
ಚಿರತೆ ಸೆರೆಹಿಡಿಯಲು ವಿನೋದ್ ಅವರ ಮನೆ ಸನಿಹವೇ ಬೋನನ್ನಿರಿಸಲಾಗಿದ್ದರೂ, ಅತ್ತ ಸುಳಿಯದೆ, ಸಾಕು ನಾಯಿಯ ಮೇಲೆ ದಾಳಿ ನಡೆಸುತ್ತಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ. ಕಳೆದ ಕೆಲವು ತಿಂಗಳಿಂದ ಮುಲ್ಳೇರಿಯ, ಬೊವಿಕ್ಕಾನ, ಬೇಡಡ್ಕ ಆಸುಪಾಸು ಚಿರತೆ ಉಪಟಳ ತೀವ್ರಗೊಂಡಿದೆ.