ರಾಯಪುರ: ಮಹಿಳಾ ನಕ್ಸಲ್ ಮಾಲತಿ ಅಲಿಯಾಸ್ ರಾಜೆ (48) ಹಾಗೂ ಆಕೆಯ ಸಹಚರ ಶ್ಯಾಮನಾಥ್ ಉಸೆಂಡಿಯನ್ನು ಕಾಂಕೇರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಮಾವೋವಾದಿಗಳ ವಿಭಾಗೀಯ ಸಮಿತಿ ಸದಸ್ಯೆಯಾದ ಮಾಲತಿಗೆ, ಉಸೆಂಡಿ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ಇಬ್ಬರನ್ನು ಕೊಯಲಿಬೆಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎಂದು ಬಸ್ತಾರ್ ವಲಯದ ಐಜಿಪಿ ಸುಂದರರಾಜ್ ಪಿ.ಅವರು ಸೋಮವಾರ ತಿಳಿಸಿದರು.
ರಾಜೇ ಪತಿ ಪ್ರಭಾಕರ್ ಅಲಿಯಾಸ್ ಬಲ್ಮುರಿ ರಾವ್‌ನನ್ನು ಕಳೆದ ಡಿ.22ರಂದು ಬಂಧಿಸಲಾಗಿತ್ತು. ದಂಪತಿಯ ಬಂಧನದಿಂದ ಛತ್ತೀಸಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಬಸ್ತಾರ್‌ನ ಉತ್ತರ ವಿಭಾಗದ ರೌಘಾಟ್ ಪ್ರದೇಶ ಸಮಿತಿಯ ಉಸ್ತುವಾರಿ ವಹಿಸಿದ್ದ ರಾಜೆ ಕುರಿತು ಮಾಹಿತಿ ನೀಡಿದರೆ ಅಥವಾ ಹಿಡಿದುಕೊಟ್ಟವರಿಗೆ ₹ 8 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.
ಬಸ್ತಾರ್ ವಲಯದಲ್ಲಿ 2024ರಲ್ಲಿ 925 ನಕ್ಸಲರನ್ನು ಬಂಧಿಸಲಾಗಿದೆ.