ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಮೊಸಳೆಯ ತಲೆಬುರಡೆ ಕಳ್ಳಸಾಗಣೆಗೆ ಯತ್ನಿಸಿದ ಆರೋಪದಲ್ಲಿ ಕೆನಡಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಇಂದು (ಗುರುವಾರ) ತಿಳಿಸಿದೆ.
ಟರ್ಮಿನಲ್ 3ರಲ್ಲಿ ಕೆನಡಾ ಮೂಲದ ವ್ಯಕ್ತಿ ಮಾಂಟ್ರಿಯಲ್‌ಗೆ ವಿಮಾನ ಹತ್ತಲು ಯತ್ನಿಸುತ್ತಿದ್ದ ವೇಳೆ, ಭದ್ರತಾ ಸಿಬ್ಬಂದಿ ನಡೆಸಿದ ತಪಾಸಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ತಪಾಸಣೆ ವೇಳೆಯಲ್ಲಿ ಮೊಸಳೆಯ ಮರಿಯನ್ನು ಹೋಲುವ ಸುಮಾರು 770 ಗ್ರಾಂ ತೂಕದ ಚೂಪಾದ ಹಲ್ಲುಗಳನ್ನು ಹೊಂದಿರುವ ತಲೆಬುರುಡೆಯನ್ನು ಪತ್ತೆ ಹಚ್ಚಲಾಗಿದೆ.
ದೆಹಲಿ ಸರ್ಕಾರದ ಅಧೀನದಲ್ಲಿರುವ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ನಡೆಸಿದ ಶೋಧ ಕಾರ್ಯದಲ್ಲಿ ಇದು ಮೊಸಳೆ ಮರಿಯ ತಲೆಬುರುಡೆ ಎಂದು ದೃಢಪಟ್ಟಿದೆ.
1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಸಂರಕ್ಷಿತ ಜಾತಿಗೆ ಸೇರಿದ ತಲೆಬುರುಡೆ ಇದಾಗಿದೆ. ಹೆಚ್ಚಿನ ವೈಜ್ಞಾನಿಕ ತಪಾಸಣೆಗೆ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.