ಒಟ್ಟಾವ: ಕೆನಡಾದ ಆಡಳಿತಾರೂಢ ಲಿಬರಲ್ ಪಾರ್ಟಿಯು ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸ್ಥಾನಕ್ಕೆ ಹೊಸ ನಾಯಕನನ್ನು ಹುಡುಕುವ ಪ್ರಯತ್ನ ಆರಂಭಿಸಿದೆ. ಪ್ರಧಾನಿ ಹುದ್ದೆ ಹಾಗೂ ಲಿಬರಲ್ ಪಾರ್ಟಿಯ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಉದ್ದೇಶಿಸಿರುವುದಾಗಿ ಟ್ರುಡೊ ಅವರು ಸೋಮವಾರ ಘೋಷಿಸಿದ್ದರು.
ಲಿಬರಲ್ ಪಾರ್ಟಿಯ ನಾಯಕನ ಆಯ್ಕೆಗೆ ನಡೆಯುವ ಸ್ಪರ್ಧೆಯ ವಿವರಗಳನ್ನು ಪಕ್ಷವು ಬಿಡುಗಡೆ ಮಾಡಿಲ್ಲ. ಆದರೆ ಭಾರತ ಮೂಲದ ಅನಿತಾ ಆನಂದ್ ಸೇರಿದಂತೆ ಹಲವು ಆಕಾಂಕ್ಷಿಗಳ ಹೆಸರು ಮುನ್ನೆಲೆಗೆ ಬಂದಿದೆ. ಸಾರಿಗೆ ಸಚಿರಾಗಿರುವ 57 ವರ್ಷದ ಅನಿತಾ ಅವರು 2019ರಿಂದ ಸಂಸದರಾಗಿದ್ದಾರೆ. ಅವರು ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ರಕ್ಷಣೆ ಖಾತೆಗಳನ್ನೂ ನಿಭಾಯಿಸಿದ್ದಾರೆ. ಖಜಾನೆ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಮಾಜಿ ಹಣಕಾಸು ಸಚಿವರಾದ ಕ್ರಿಸ್ಟಿಯಾ ಫ್ರೀಲ್ಯಾಂಡ್, ಬ್ಯಾಂಕ್ ಆಫ್ ಕೆನಡಾದ ಮಾಜಿ ಗವರ್ನರ್ ಮಾರ್ಕ್ ಕಾರ್ನಿ, ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಮತ್ತು ಸಚಿವ ಫ್ರಾಂಸಾಯ್ಸ್ ಫಿಲಿಪೆ ಶಾಂಪೇನ್ ಅವರೂ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.
ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ತಾನು ಇಲ್ಲ ಎಂದು ಹಣಕಾಸು ಸಚಿವ ಡಾಮಿನಿಕ್ ಲೆಬ್ಲಾಂಕ್ ಅವರು ಬುಧವಾರ ಹೇಳಿದ್ದಾರೆ.