ನವದೆಹಲಿ: ಎಚ್‌ಎಂಪಿವಿ ಹೊಸ ವೈರಾಣು ಅಲ್ಲ, ದೇಶದಲ್ಲಿ ಉಸಿರಾಟದ ಸಮಸ್ಯೆ ಸೃಷ್ಟಿಸುವ ರೋಗಕಾರಕಗಳ ಹರಡುವಿಕೆ ಏರಿಕೆ ಕಂಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.
ಎಚ್‌ಎಂಪಿವಿ ವಿಚಾರವಾಗಿ ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ, ಚಿಂತೆಗೆ ಒಳಗಾಗಬೇಕಾದ ಸ್ಥಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಚೀನಾ ಹಾಗೂ ಇತರ ನೆರೆಯ ದೇಶಗಳಲ್ಲಿನ ಪರಿಸ್ಥಿತಿ ಮೇಲೆ ಸೂಕ್ಷ್ಮ ನಿಗಾ ಇರಿಸಿವೆ ಎಂದು ಕೂಡ ವಿಡಿಯೊ ಸಂದೇಶದಲ್ಲಿ ನಡ್ಡಾ ಹೇಳಿದ್ದಾರೆ.
ಎಚ್‌ಎಂಪಿವಿ ಹೊಸ ವೈರಾಣು ಅಲ್ಲ, ಅದು 2001ರಿಂದಲೇ ಇದೆ ಎಂಬುದನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ. ಈ ವೈರಾಣು ಜಗತ್ತಿನ ಎಲ್ಲೆಡೆ ಇದೆ. ಇದು ಉಸಿರಾಟದ ಮೂಲಕ ಗಾಳಿಯಲ್ಲಿ ಹರಡುತ್ತದೆ ಎಂದು ಅವರು ಹೇಳಿದ್ದಾರೆ.