ಲಂಡನ್: ಎಚ್‌ಐವಿ, ಮಲೇರಿಯಾ ಹಾಗೂ ಕ್ಷಯರೋಗಕ್ಕೆ ಸಂಬಂಧಿಸಿದ ಜೀವರಕ್ಷಕ ಔಷಧಿಗಳನ್ನು ಬಡರಾಷ್ಟ್ರಗಳಿಗೆ ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲು ಟ್ರಂಪ್ ಆಡಳಿತ ನಿರ್ಧರಿಸಿದೆ.
ನವಜಾತ ಶಿಶುಗಳಿಗೆ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್ (ಯುಎಸ್‌ಎಐಡಿ) ಮೂಲಕ ಪೂರೈಸುತ್ತಿರುವ ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳ ಸರಬರಾಜನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ಜ್ಞಾಪನಪತ್ರ (ಮೆಮೊ) ರಾಯಿಟರ್ಸ್‌ಗೆ ಲಭಿಸಿದೆ.
ಯುಎಸ್‌ಎಐಡಿಯ ಪಾಲುದಾರರು ಮತ್ತು ಗುತ್ತಿಗೆದಾರರು ತಕ್ಷಣದಿಂದಲೇ ಜೀವರಕ್ಷಕ ಔಷಧಿಗಳ ಸರಬರಾಜು ಸ್ಥಗಿತಗೊಳಿಸುವ ಸಂಬಂಧ ಮಂಗಳವಾರದಿಂದಲೇ ಆದೇಶಗಳನ್ನು ಸ್ವೀಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ನಂತರ ಯುಎಸ್ ನೆರವು ಮತ್ತು ನಿಧಿಯ ಬಳಕೆ ಮೇಲೆ ಕಣ್ಗಾವಲಿಡಲಾಗಿದೆ. ಕೆಲವೊಂದು ನೆರವನ್ನು ಸ್ಥಗಿತಗೊಳಿಸಲಾಗಿದ್ದು, ಹಲವು ಕಾರ್ಯಕ್ರಮಗಳಿಗೆ ಸಹಾಯ ನೀಡುವುದನ್ನು ಪುನರ್ ಪರಿಶೀಲಿಸಲಾಗುತ್ತಿದೆ.
ಬಡರಾಷ್ಟ್ರಗಳಿಗೆ ನೆರವು ನೀಡುವಲ್ಲಿ ಅಮೆರಿಕ ಮುಂಚೂಣಿಯಲ್ಲಿದೆ. ಟ್ರಂಪ್ ಆಡಳಿತ ಕೆಲವೊಂದು ಸಹಾಯ ಸ್ಥಗಿತಗೊಳಿಸುತ್ತಿರುವುದು ಬಡದೇಶಗಳ ಪಾಲಿಗೆ ನುಂಗಲಾರದ ತುತ್ತಾಗಿದೆ.