ನವದೆಹಲಿ: 'ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಮತ್ತು ಮತ್ತೊಬ್ಬರ ವಾಗ್ದಂಡನೆಗೆ ಭಾರತ ಸಂಚು ನಡೆಸಿತ್ತು' ಎಂಬುದಕ್ಕೆ ಸಂಬಂಧಿಸಿ 'ವಾಷಿಂಗ್ಟನ್ ಪೋಸ್ಟ್' ದೈನಿಕ ಮಾಡಿದ್ದ ಇತ್ತೀಚಿನ ಎರಡು ವರದಿಗಳನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕಿದೆ.
ಪಾಕಿಸ್ತಾನದಲ್ಲಿ ಕೆಲ ಭಯೋತ್ಪಾದಕ ಶಕ್ತಿಗಳ ನಿರ್ಮೂಲನೆಗೆ ಭಾರತೀಯ ಏಜೆಂಟರು ನಡೆಸಿದ್ದ ಯತ್ನದ ಭಾಗವಾಗಿ ಈ ಸಂಚು ನಡೆದಿತ್ತು ಎಂದು ವರದಿ ಉಲ್ಲೇಖಿಸಿತ್ತು.
ವರದಿಯನ್ನು ತಳ್ಳಿಹಾಕಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಅವರು, 'ದೈನಿಕ ಮತ್ತು ಅದರ ವರದಿಗಾರ ಭಾರತದೆಡೆಗೆ 'ಉದ್ದೇಶಪೂರ್ವಕವಾದ ಹಗೆತನ' ಹೊಂದಿರುವಂತಿದೆ' ಎಂದು ಪ್ರತಿಕ್ರಿಯಿಸಿದರು.
ಮಾಲ್ದೀವ್ಸ್ ಕುರಿತ 'ಪ್ರಜಾಸತ್ತಾತ್ಮಕ ಪುನರುಜ್ಜೀವನ ಕ್ರಮಗಳು' ವರದಿಯಲ್ಲಿ, ಅಧ್ಯಕ್ಷ ಮುಯಿಜು ವಾಗ್ದಂಡನೆಗೆ ಗುರಿಪಡಿಸಬೇಕು ಎಂಬುದರ ಪರ ಮತ ಹಾಕಲು ಮುಯಿಜು ಪಕ್ಷದವರೂ ಸೇರಿ ಅಲ್ಲಿನ 40 ಸಂಸದರಿಗೆ ಆಮಿಷ ಒಡ್ಡಲಾಗಿತ್ತು. ಸುದೀರ್ಘ ಕಾಲ ಗೋಪ್ಯ ಸಭೆ ನಡೆಸಿದರೂ, ಅಗತ್ಯವಿದ್ದ ಮತ ಕ್ರೋಢಿಕರಿಸಲು ಆಗಿರಲಿಲ್ಲ' ಎಂದು ಹೇಳಲಾಗಿತ್ತು.
'ದೈನಿಕ, ವರದಿಗಾರರಿಗೆ ಭಾರತ ಕುರಿತು ಹಗೆತನ ಇರುವಂತಿದೆ. ಅವರ ಚಟುವಟಿಕೆಗಳಲ್ಲಿ ಅದನ್ನು ಗ್ರಹಿಸಬಹುದು. ವರದಿಯ ವಿಶ್ವಾಸಾರ್ಹತೆ ಗುರುತಿಸುವುದನ್ನು ನಿಮಗೆ ಬಿಡುತ್ತೇನೆ. ನಮ್ಮ ಪ್ರಕಾರ, ಅವು ವಿಶ್ವಾಸಾರ್ಹವಲ್ಲ' ಎಂದು ಜೈಸ್ವಾಲ್ ಪ್ರತಿಕ್ರಿಯಿಸಿದರು.
'ಹಿಲರಿ ಕ್ಲಿಂಟನ್ ಅವರು ಹಿಂದೊಮ್ಮೆ, 'ಹಿತ್ತಲಲ್ಲಿ ಹಾವುಗಳನ್ನು ಸಾಕಿಕೊಂಡು, ಅವು ನಿಮ್ಮ ನೆರೆಯವರನ್ನು ಮಾತ್ರ ಕಚ್ಚಬೇಕು ಎಂದು ನಿರೀಕ್ಷಿಸಲಾಗದು' ಎಂದು ಹಿಂದೊಮ್ಮೆ ಹೇಳಿದ್ದರು. ವರದಿಯಲ್ಲಿ ಉಲ್ಲೇಖವಾದ ಪಾಕಿಸ್ತಾನಕ್ಕೆ ಸಂಬಂಧಿಸಿ ಅದೇ ಮಾತನ್ನು ಈಗ ನೆನಪಿಸಲು ಬಯಸುತ್ತೇನೆ' ಎಂದು ಜೈಸ್ವಾಲ್ ಅವರು ಹೇಳಿದರು.