ಪಾಟ್ನಾ: 'ವಿರೋಧ ಪಕ್ಷಗಳೊಂದಿಗೆ ತಪ್ಪಾಗಿ ನಾನು ಮೈತ್ರಿ ಮಾಡಿಕೊಂಡಿದ್ದೆ. ವಿಪಕ್ಷಗಳ ಒಕ್ಕೂಟ ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ' ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಹೇಳಿದ್ದಾರೆ.
'ತನ್ನ ಮಾಜಿ ಮಿತ್ರ ಪಕ್ಷ ಜೆಡಿಯುಗೆ ಬಾಗಿಲು ತೆರೆದಿದೆ' ಎನ್ನುವ ಮೂಲಕ 'ಇಂಡಿಯಾ' ಒಕ್ಕೂಟ ಮತ್ತೆ ಸೇರ್ಪಡೆಯಾಗುವಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ನೀಡಿದ್ದ ಆಹ್ವಾನವನ್ನು ನಿತೀಶ್ ಕುಮಾರ್ ತಿರಸ್ಕರಿಸಿದ್ದಾರೆ.
ಮುಜಫ್ಫರಪುರದಲ್ಲಿ ಹಮ್ಮಿಕೊಂಡಿರುವ 'ಪ್ರಗತಿ ಯಾತ್ರಾ'ದಲ್ಲಿ ಭಾಗಿಯಾಗಿದ್ದ ನಿತೀಶ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ,'ನಮಗಿಂತಲೂ ಮೊದಲು ಅಧಿಕಾರದಲ್ಲಿದ್ದವರು ಏನಾದರೂ ಮಾಡಿದ್ದಾರೆಯೇ? ಸೂರ್ಯಾಸ್ತದ ಬಳಿಕ ಜನರು ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದರು' ಎಂದರು.
'ಎರಡು ಬಾರಿ ತಪ್ಪಾಗಿ ಅವರೊಂದಿಗೆ ನಾನು ಕೈಜೋಡಿಸಿದೆ' ಎಂದೂ ಹೇಳಿದರು.
'ಆಗ, ರಾಜ್ಯದ ಮಹಿಳೆಯರ ಸ್ಥಿತಿ ಏನಾಗಿತ್ತು? ಈಗ ಮಹಿಳೆಯರ ಸ್ವಸಹಾಯ ಗುಂಪುಗಳಾದ 'ಜೀವಿಕಾ' ಕಾರ್ಯವನ್ನು ನೀವು ನೋಡಬಹುದು. ಇದೇ ಮಾದರಿಯಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿರುವ ಕೇಂದ್ರ ಸರ್ಕಾರ ಅವುಗಳನ್ನು 'ಆಜೀವಿಕಾ' ಎಂದು ಕರೆದಿದೆ. ಗ್ರಾಮೀಣ ಮಹಿಳೆಯರಲ್ಲಿ ಈ ರೀತಿಯ ಆತ್ಮವಿಶ್ವಾಸವನ್ನು ಈ ಹಿಂದೆ ನಿಮಗೆ ಕಂಡಿತ್ತೇ' ಎಂದು ಪ್ರಶ್ನಿಸಿದರು.
ಇದೇ ವರ್ಷ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಿತೀಶ್ ಕುಮಾರ್ ಅವರೇ ಎನ್‌ಡಿಎ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಬಿಹಾರದ ಬಿಜೆಪಿ ನಾಯಕರು ಕೂಡ ಇದೇ ಮಾತು ಹೇಳಿದ್ದರು.
ಇದರ ಬೆನ್ನಲ್ಲೇ, ಲಾಲು ಪ್ರಸಾದ್ ಅವರು, ನಿತೀಶ್ ಕುಮಾರ್ ಬರುವುದಾದರೆ 'ಇಂಡಿಯಾ' ಒಕ್ಕೂಟದ ಬಾಗಿಲು ತೆರೆದಿರುತ್ತದೆ ಎಂಬ ಹೇಳಿಕೆ ನೀಡಿದ್ದರು.
ಲಾಲು ಪ್ರಸಾದ್ ಅವರ ಈ ಹೇಳಿಕೆಗೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಪುತ್ರ ತೇಜಸ್ವಿ ಯಾದವ್ ಹೇಳಿದ್ದರು. ಆದರೆ, 'ಇಂಡಿಯಾ' ಒಕ್ಕೂಟ ಅಂಗಪಕ್ಷವಾದ ಕಾಂಗ್ರೆಸ್ ಈ ಹೇಳಿಕೆಯನ್ನು ಅನುಮೋದಿಸಿತ್ತು.