ಒಟ್ಟಾವ: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಯಾವುದೇ ವಿದೇಶದ ಕೈವಾಡ ಇರುವ ಬಗ್ಗೆ ಸಾಬೀತುಪಡಿಸಲಾಗಿಲ್ಲ ಎಂದು ಕೆನಡಾದ ಆಯೋಗವೊಂದರ ವರದಿಯು ಹೇಳಿದ್ದು, ಹತ್ಯೆಯಲ್ಲಿ ಭಾರತದ ಏಜೆಂಟರುಗಳ ಕೈವಾಡವಿದೆ ಎಂಬ ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪಗಳನ್ನು ತಳ್ಳಿಹಾಕಿದೆ.
2023ರ ಜೂನ್ ತಿಂಗಳಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂಬುದಕ್ಕೆ ಕೆನಡಾವು ನಂಬಲರ್ಹವಾದ ಪುರಾವೆಗಳನ್ನು ಹೊಂದಿದೆ ಎಂದು ಟ್ರೂಡೊ 2023ರ ಸೆಪ್ಟೆಂಬರ್‌ನಲ್ಲಿ ಆರೋಪಿಸಿದ್ದರು.
'ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಕುರಿತು ಸಾರ್ವಜನಿಕ ವಿಚಾರಣೆ'ಎಂಬ ಶೀರ್ಷಿಕೆ ಇರುವ ವರದಿಯನ್ನು ಕೆನಡಾ ಬಿಡುಗಡೆ ಮಾಡಿದೆ.
'ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾದ ನಿರ್ಧಾರಗಳನ್ನು ಶಿಕ್ಷಿಸಲು ತಪ್ಪು ಮಾಹಿತಿಯನ್ನು ಪ್ರತೀಕಾರದ ತಂತ್ರವಾಗಿ ಬಳಸಲಾಗುತ್ತದೆ. ನಿಜ್ಜರ್ ಹತ್ಯೆಯ ಬಗ್ಗೆ ಭಾರತವು ತಪ್ಪು ಮಾಹಿತಿಯನ್ನು ಹರಡಿದೆ. ನಿಜ್ಜರ್ ಹತ್ಯೆಯಲ್ಲಿ ಶಂಕಿತ ಭಾರತೀಯನ ಭಾಗಿದಾರಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಟ್ರುಡೊ ಘೋಷಣೆಯ ನಂತರ ತಪ್ಪು ಮಾಹಿತಿಯ ಪ್ರಚಾರ ಆಗಿರಬಹುದು. ಆದರೆ, ನಿಜ್ಜರ್ ಹತ್ಯೆಯಲ್ಲಿ ವಿದೇಶಕ್ಕೆ ಯಾವುದೇ ಖಚಿತವಾದ ಸಂಬಂಧವನ್ನು ಸಾಬೀತುಪಡಿಸಲಾಗಿಲ್ಲ' ಎಂದು ವರದಿಯಲ್ಲಿ ಕಮಿಷನರ್ ಮೇರಿ-ಜೋಸಿ ಹೊಗ್ ಹೇಳಿದ್ದಾರೆ.
2023ರ ಜೂನ್‌ನಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ನಿಜ್ಜರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
123 ಪುಟಗಳ ವರದಿಯಲ್ಲಿ ಆರು ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ, ಕೆನಡಾವು ಭಾರತದ 6 ರಾಜತಾಂತ್ರಿಕರು ಮತ್ತು ದೂತಾವಾಸ ಅಧಿಕಾರಿಗಳನ್ನು ಹೊರಹಾಕಿತ್ತು.ಅದಕ್ಕೆ ಪ್ರತಿಯಾಗಿ, ಭಾರತವೂ ಆರು ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿತ್ತು ಮತ್ತು ತನ್ನ ಹೈಕಮಿಷನರ್ ಅನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು.
ನಿಜ್ಜರ್ ಹತ್ಯೆಯಯಲ್ಲಿ ಭಾರತದ ಕೈವಾಡದ ಬಗ್ಗೆ ಕೆನಡಾ ಪ್ರಧಾನಿ ಟ್ರುಡೊ ಆರೋಪದ ಬಳಿಕ ಉಭಯ ದೇಶಗಳ ಸಂಬಂಧ ತೀವ್ರ ಹದಗೆಟ್ಟಿತ್ತು. ಆರೋಪಗಳನನ್ನು ಭಾರತ ತಳ್ಳಿಹಾಕಿತ್ತು.