ನವದೆಹಲಿ: ಸಿಸಿಟಿವಿ ಮತ್ತು ಇತರ ಚುನಾವಣಾ ಸಂಬಂಧಿತ ದಾಖಲೆಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ 1961ರ ಚುನಾವಣಾ ನಿಯಮಗಳಿಗೆ ಇತ್ತೀಚಿನ ಮಾಡಲಾದ ತಿದ್ದುಪಡಿಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು, ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಅವರ ವಾದಗಳನ್ನು ಪರಿಗಣಿಸಿ, ಅರ್ಜಿಯ ಮೇಲೆ ನೋಟಿಸ್ ಜಾರಿಗೊಳಿಸಿದೆ.
ಮಾರ್ಚ್ 17ರಿಂದ ಆರಂಭವಾಗುವ ವಾರದಲ್ಲಿ ಅರ್ಜಿಯ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
ಮತದಾನದ ಪ್ರಕ್ರಿಯೆಗೆ ಸಂಬಂಧಿಸಿದ ಸಿಸಿಟಿವಿ ಕ್ಯಾಮೆರಾ ಮತ್ತು ವೆಬ್‌ಕಾಸ್ಟಿಂಗ್ ದೃಶ್ಯಾವಳಿಗಳು ಹಾಗೂ ಅಭ್ಯರ್ಥಿಗಳ ವಿಡಿಯೊ ರೆಕಾರ್ಡಿಂಗ್‌ಗಳಂತಹ ಕೆಲವು ಎಲೆಕ್ಟ್ರಾನಿಕ್ ದಾಖಲೆಗಳ ಸಾರ್ವಜನಿಕ ತಪಾಸಣೆಯನ್ನು ತಡೆಯಲು ಸರ್ಕಾರವು ಚುನಾವಣಾ ನಿಯಮವನ್ನು ತಿರುಚಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆ ಹೊತ್ತಿರುವ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಏಕಪಕ್ಷೀಯವಾಗಿ ಮತ್ತು ಸಾರ್ವಜನಿಕ ಸಮಾಲೋಚನೆಯಿಲ್ಲದೆ ಇಂತಹ ಮಹತ್ವದ ಕಾನೂನನ್ನು ಲಜ್ಜೆಗೆಟ್ಟ ರೀತಿಯಲ್ಲಿ ತಿದ್ದುಪಡಿ ಮಾಡಲು ಬಿಡಬಾರದು ಎಂದು ರಮೇಶ್ ಹೇಳಿದ್ದರು.
ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸುವ ಅಗತ್ಯ ಮಾಹಿತಿ ಸಾರ್ವಜನಿಕರಿಗೆ ಸಿಗದಂತೆ ತಿದ್ದುಪಡಿ ಮೂಲಕ ನಿರ್ಬಂಧಿಸಲಾಗಿದೆ ಎಂದಿದ್ದರು.
ಆಯೋಗ ಸಮರ್ಥನೆ
ಚುನಾವಣಾ ನಿಯಮಗಳಿಗೆ ತಿದ್ದುಪಡಿ ತಂದಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್, 'ಮತದಾರರ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಮತಗಟ್ಟೆಯಲ್ಲಿನ ಸಿ.ಸಿ.ಟಿವಿ ದೃಶ್ಯಗಳನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಮಂಗಳವಾರ ಹೇಳಿದ್ದರು.
'ಮತಗಟ್ಟೆಗೆ ಸಂಬಂಧಿಸಿದ ದತ್ತಾಂಶಗಳ ಬಳಸಿ, ಸುಳ್ಳು ಸಂಕಥನ ಸೃಷ್ಟಿಸುವುದನ್ನು ತಡೆಯುವ ಉದ್ದೇಶವೂ ಈ ಕ್ರಮ ತೆಗೆದುಕೊಳ್ಳಲಾಗಿದೆ' ಎಂದಿದ್ದರು.
'10.5 ಲಕ್ಷ ಮತಗಟ್ಟೆಗಳಲ್ಲಿ 10 ಗಂಟೆಯಷ್ಟು ಮತದಾನ ನಡೆಯುತ್ತದೆ. ಅಂದರೆ, ಅಂದಾಜು ಒಂದು ಕೋಟಿ ಗಂಟೆಗಳಷ್ಟು ದತ್ತಾಂಶ ಸಂಗ್ರಹವಾಗುತ್ತದೆ. ಒಬ್ಬ ವ್ಯಕ್ತಿ ದಿನಕ್ಕೆ 8 ಗಂಟೆ ಈ ದತ್ತಾಂಶ ವೀಕ್ಷಿಸುತ್ತಾನೆ ಅಂದುಕೊಂಡರೂ, ಎಲ್ಲ ದೃಶ್ಯಗಳನ್ನು ವೀಕ್ಷಿಸಲು ಆತನಿಗೆ 3,600 ವರ್ಷ ಬೇಕಾಗುತ್ತದೆ' ಎಂದರು.