ಸೋಲ್: ದಕ್ಷಿಣ ಕೊರಿಯಾದ ಮುವಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ವಿಮಾನದ ಎರಡು ಎಂಜಿನ್‌ಗಳಲ್ಲಿ ಹಕ್ಕಿಯ ಗರಿಗಳು ಹಾಗೂ ರಕ್ತ ಕಂಡುಬಂದಿದೆ. ತನಿಖಾಧಿಕಾರಿಗಳು ಈ ಮಾಹಿತಿ ನೀಡಿರುವುದಾಗಿ ಮೂಲಗಳು ಶುಕ್ರವಾರ ರಾಯಿಟರ್ಸ್‌ಗೆ ತಿಳಿಸಿವೆ.
'ಜೆಜು ಏರ್' ವಿಮಾನಯಾನ ಸಂಸ್ಥೆಗೆ ಸೇರಿದ Jeju Air 7C2216 ವಿಮಾನವು ಡಿಸೆಂಬರ್ 29ರಂದು ಲ್ಯಾಂಡ್ ಆಗುವ ವೇಳೆ ಅಪಘಾತಕ್ಕೀಡಾಗಿತ್ತು. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಮುವಾನ್‌ಗೆ ಬಂದಿದ್ದ ಅದು, ರನ್‌ವೇನಿಂದ ಜಾರಿ ಕಾಂಕ್ರಿಟ್ ಗೋಡೆಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ತಕ್ಷಣವೇ ಸ್ಫೋಟಗೊಂಡಿತ್ತು.
6 ಸಿಬ್ಬಂದಿ ಸೇರಿದಂತೆ ವಿಮಾನದಲ್ಲಿದ್ದ 181 ಮಂದಿಯ ಪೈಕಿ ಕೇವಲ ಇಬ್ಬರಷ್ಟೇ ಬದುಕುಳಿದಿದ್ದಾರೆ. ಇದು, ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ದುರಂತಗಳಲ್ಲಿ ಒಂದಾಗಿದೆ.
ಅಪಘಾತದ ಸ್ಥಳದಿಂದ ವಶಕ್ಕೆ ಪಡೆದ ಎಂಜಿನ್‌ನಗಳಲ್ಲಿ ಗರಿಗಳು ಇರುವುದು ಕಂಡುಬಂದಿದೆ ಎನ್ನಲಾಗಿದೆ. ಆದರೆ, ಈ ಕುರಿತು ಪ್ರತಿಕ್ರಿಯಿಸಲು ದ.ಕೊರಿಯಾದ ಸಾರಿಗೆ ಸಚಿವಾಲಯದ ಅಧಿಕಾರಿಗಳು ನಿರಾಕರಿಸಿದ್ದಾರೆ.