ಬರ್ಲಿನ್: ಗ್ರೀನ್‌ಲ್ಯಾಂಡ್ ಹಾಗೂ ಕೆನಡಾ ಕುರಿತು ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಖಂಡಿಸಿರುವ ಜರ್ಮನಿ, ಯಾವುದೇ ರಾಷ್ಟ್ರವು ತನ್ನ ಗಡಿಯನ್ನು ಬಲವಂತದಿಂದ ವಿಸ್ತರಿಸುವಂತಿಲ್ಲ ಎಂಬ ಅಂತರರಾಷ್ಟ್ರೀಯ ತತ್ವವನ್ನು ಪುನರುಚ್ಚರಿಸಿದೆ.
ಈ ಕುರಿತು ಸರ್ಕಾರದ ವಕ್ತಾರ ಮಾಹಿತಿ ನೀಡಿ, 'ಸದಾ ಕಾಲ ವಿಶ್ವಸಂಸ್ಥೆಯ ತತ್ವಗಳು ಮತ್ತು ಹೆಲ್ಸಿಂಕಿ ಒಪ್ಪಂದವನ್ನು ಗೌರವಿಸಬೇಕು. ಗಡಿಗಳನ್ನು ಬಲವಂತದಿಂದ ವಿಸ್ತರಿಸಬಾರದು' ಎಂದು ಹೇಳಿದ್ದಾರೆ.
ಟ್ರಂಪ್ ಅವರ ಹೇಳಿಕೆಯನ್ನು ಜರ್ಮನಿ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ಪನಾಮಾ ಕೆನಾಲ್ ಹಾಗೂ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಸೇನೆ, ಆರ್ಥಿಕ ದಾಳಿ ನಡೆಸುವ, ಜತೆಗೆ ಕೆನಡಾವನ್ನು ಅಮೆರಿಕದ ರಾಜ್ಯವನ್ನಾಗಿಸುವ ಪ್ರಯತ್ನ ಕುರಿತ ತಮ್ಮ ಹೇಳಿಕೆ ಕುರಿತು ಡೊನಾಲ್ಡ್ ಟ್ರಂಪ್ ಮಂಗಳವಾರ ತೇಲಿಸಿದರು.