ನವದೆಹಲಿ: ನಾಮಪತ್ರವನ್ನು ತಿರಸ್ಕರಿಸಿದ್ದ ಪ್ರಕರಣವೊಂದರಲ್ಲಿ ಪ್ರತಿವಾದಿಗಳಾಗಿದ್ದ ಚುನಾವಣಾ ಆಯೋಗ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಹೆಸರನ್ನು ಕೈಬಿಡಬೇಕು ಎಂದಿದ್ದ ಅಲಹಾಬಾದ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗುರುವಾರ ಆಯೋಗ ಹಾಗೂ ಗೌತಮಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನೋಟಿಸ್ ನೀಡಿದೆ.
2019ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದ ಗೌತಮಬುದ್ಧ ನಗರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಗೀತಾ ರಾಣಿ ಶರ್ಮಾ ಅವರ ನಾಮಪತ್ರವನ್ನು ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ತಿರಸ್ಕರಿಸಿದ್ದರು. 'ನನ್ನ ನಾಮಪತ್ರವನ್ನು ತಿಸ್ಕರಿಸಿದ್ದು ಕಾನೂನುಬಾಹಿರವಾಗಿದೆ' ಎಂದು ಗೀತಾ ವಾದಿಸಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರು, 'ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವು ದೋಷಪೂರಿತವಾಗಿದೆ. ಕೊನೆಪಕ್ಷ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಹೆಸರನ್ನು ಕೈಬಿಡುವಂತೆ ನ್ಯಾಯಾಲಯ ಆದೇಶ ನೀಡಬಾರದಿತ್ತು' ಎಂದು ಪೀಠ ಹೇಳಿದೆ. ಮಾರ್ಚ್ 24ಕ್ಕೆ ಮುಂದಿನ ವಿಚಾರಣೆ ನಡೆಯಲಿದೆ.