ಮುಳ್ಳೇರಿಯ:ಮುಳಿಯಾರು, ಕಾರಡ್ಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಚಿರತೆ ಕಾಟ ಮುಂದುವರಿದಿದ್ದು, ಜನರು ಮನೆಯಿಂದ ಹೊರಗೆ ಇಳಿಯಲೂ ಭಯಬೀಳುತ್ತಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ಮುಳಿಯಾರು ಅಸುಪಾಸಿನ ವಿವಿಧೆಡೆ ಚಿರತೆ ಸಂಚರಿಸುತ್ತಿರುವುದನ್ನು ನಾಗರಿಕರು ಕಂಡಿದ್ದು, ಈ ಪ್ರದೇಶದ ಜನತೆ ಭಯದಿಂದ ಕಾಳ ಕಳೆಯುವ ಸಥಿತಿ ನಿರ್ಮಾಣವಾಘಿದೆ.
ಕಾರಡ್ಕ ಕರ್ಮಂತೋಡಿ ಸನಿಹದ ಅಡ್ಕತ್ತೊಟ್ಟಿ ಎಂಬಲ್ಲಿ ಬುಧವಾರ ರಾತ್ರಿ ಚಿರತೆಯೊಂದು ಮನೆಯಂಗಳಕ್ಕೆ ಧಾವಿಸಿ ಬಂದು ಸಾಕು ನಾಯಿಯನ್ನು ಹೊತ್ತೊಯ್ದಿದೆ. ಬಳಿಕ ನಾಗರಿಕರು ಸಂಘಟಿತರಾಗಿ ನಡೆಸಿದ ಹುಡುಕಾಟದಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಹಚ್ಚಿದ್ದು, ಚಿರತೆ ಕಾಡಿನ ಹಾದಿಯಾಗಿ ಸಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ಚಿರತೆ ಸಮಚಾರದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಕ್ರಮದಿಂದ ಆಕ್ರೋಶಿತರಾದ ನಾಗರಿಕ ಒಕ್ಕೂಟ ಬುಧವಾರ ರಾತ್ರಿ ಕಮರ್ಂತೋಡಿಯಲ್ಲಿರುವ ಅರಣ್ಯ ಇಲಾಖೆ ಕಛೇರಿಗೆ ಪಂಜಿನ ಮೆರವಣಿಗೆ ನಡೆಸಿ, ತಮ್ಮ ಪ್ರತಿಭಟನೆ ಹಾಗೂ ಆತಂಕ ವ್ಯಕ್ತಪಡಿಸಿದ್ದಾರೆ. ಆದೂರು ಠಾಣೆ ಪೊಲೀಸರೂ ಸ್ಥಳಕ್ಕಾಗಮಿಸಿದ್ದರು. ಇರಿಯಣ್ಣಿಯಲ್ಲಿ ಗುರುವಾರ ಬೆಳಗ್ಗೆ ಚಿರತೆ ಸಂಚರಿಸುತ್ತಿರುವುದನ್ನು ಸ್ಥಳೀಯರೊಬ್ಬರು ಕಂಡಿರುವುದಾಗಿ ಮಾಹಿತಿಯಿದೆ.
ಕಲೆದ ವಾರ ಮುಳಿಯಾರು, ಕಾರಡ್ಕ ಪಂಚಾಯತ್ ವ್ಯಾಪ್ತಿಯಲ್ಲಿ ಹಲವೆಡೆ ಚಿರತೆ ಕಂಡುಬಂದಿದೆ. ಮನೆಯಂಗಳಕ್ಕೆ ಧಾವಿಸಿ ಸಾಕು ನಾಯಿಗಳನ್ನು ಹೊತ್ತೊಯ್ಯುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇತ್ತೀಚಿಗೆ ಸತತ ಎರಡು ದಿವಸಗಳ ಕಾಲ ಬೋವಿಕಾನ ಪೇಟೆಯಲ್ಲೂ ಚಿರತೆ ಕಂಡುಬಂದಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾಡಿನಲ್ಲಿ ಬೋನುಗಳನ್ನು ಇರಿಸಿದ್ದರೂ ಈ ವರೆಗೆ ಒಂದೂ ಚಿರತೆ ಬೋನಿಗೆ ಬಿದ್ದಿಲ್ಲ.
(ಚಿರತೆ ಉಪಟಳ ತಡೆಗಟ್ಟುವಂತೆ ಆಗ್ರಹಿಸಿ ಕಮರ್ಂತೋಡಿಯಲ್ಲಿರುವ ಅರಣ್ಯ ಇಲಾಖೆ ಕಛೇರಿಗೆ ನಾಗರಿಕರು ಪಂಜಿನ ಮೆರವಣಿಗೆ ನಡೆಸಿ, ಪ್ರತಿಭಟನೆ ವ್ಯಕ್ತಪಡಿಸಿದರು.)