ನವದೆಹಲಿ: ಭಾರತ ಹಾಗೂ ಅಮೆರಿಕದ ಭದ್ರತೆಗೆ ಬೆದರಿಕೆ ಒಡ್ಡಿರುವುದಕ್ಕೆ ಸಂಬಂಧಿಸಿ ಅನಾಮಧೇಯ ವ್ಯಕ್ತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತಾಧಿಕಾರ ತನಿಖಾ ಸಮಿತಿ ಶಿಫಾರಸು ಮಾಡಿದೆ.
2023ರಲ್ಲಿ ನ್ಯೂಯಾರ್ಕ್‌ನಲ್ಲಿ, ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆ ನಡೆದಿತ್ತು ಎನ್ನಲಾದ ಯತ್ನದಲ್ಲಿ ಭಾರತೀಯ ಏಜೆಂಟರು ಭಾಗಿಯಾಗಿದ್ದರು ಎಂದು ಅಮೆರಿಕ ಆರೋಪಿಸಿತ್ತು. ಅಮೆರಿಕದ ಆರೋಪಗಳನ್ನು ಭಾರತ ತಳ್ಳಿ ಹಾಕಿತ್ತು.
ನಂತರ, ಈ ಆರೋಪಗಳ ಕುರಿತು ತನಿಖೆ ನಡೆಸುವುದಕ್ಕಾಗಿ ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತಾಧಿಕಾರ ಸಮಿತಿಯು ಈ ಶಿಫಾರಸು ಮಾಡಿದೆ.
'ಕೆಲ ಸಂಘಟಿತ ಕ್ರಿಮಿನಲ್ ಗುಂಪುಗಳು ಹಾಗೂ ಭಯೋತ್ಪಾದಕ ಸಂಘಟನೆಗಳು ಎರಡೂ ದೇಶಗಳ ಭದ್ರತೆಗೆ ಬೆದರಿಕೆ ಒಡ್ಡಿದ್ದರ ಕುರಿತು ತನಿಖೆ ನಡೆಸಿದ ನಂತರ ಸಮಿತಿ ಈ ಶಿಫಾರಸು ಮಾಡಿದೆ' ಎಂದು ಗೃಹ ಸಚಿವಾಲಯ ಬುಧವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಸಚಿವಾಲಯವು ವ್ಯಕ್ತಿಯ ಹೆಸರು ಬಹಿರಂಗಪಡಿಸಿಲ್ಲ ಹಾಗೂ ಸಮಿತಿಯು ಯಾವಾಗ ವರದಿ ಸಲ್ಲಿಸಿದೆ ಎಂಬ ಮಾಹಿತಿಯನ್ನೂ ನೀಡಿಲ್ಲ. ಆದರೆ, ಅನಾಮಧೇಯ ವ್ಯಕ್ತಿ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ ಎಂದಷ್ಟೆ ತಿಳಿಸಿದೆ.
'ಸಂಘಟಿತ ಕ್ರಿಮಿನಲ್ ಗುಂಪುಗಳು ಹಾಗೂ ಭಯೋತ್ಪಾದಕ ಸಂಘಟನೆಗಳು, ಡ್ರಗ್ಸ್ ಪೆಡ್ಲರ್‌ಗಳ ಕುರಿತು ಅಮೆರಿಕ ಹಂಚಿಕೊಂಡಿದ್ದ ಮಾಹಿತಿ ಆಧರಿಸಿ 2023ರ ನವೆಂಬರ್‌ನಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿತ್ತು. ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳು ಕೂಡ ಈ ಬೆಳವಣಿಗೆಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆಸಿದ್ದರು' ಎಂದೂ ಸಚಿವಾಲಯ ತಿಳಿಸಿದೆ.
ಪನ್ನೂ ಹತ್ಯೆಗೆ ನಡೆದಿತ್ತು ಎನ್ನಲಾದ ಯತ್ನದಲ್ಲಿ ವಿಕಾಸ್ ಯಾದವ್ ಭಾಗಿಯಾಗಿದ್ದರು ಎಂದು ಅಮೆರಿಕ ಹೇಳಿತ್ತು. ಈತ 'ರಾ' (ಆರ್ ಆಯಂಡ್ ಡಬ್ಲ್ಯು) ಮಾಜಿ ಅಧಿಕಾರಿಯಾಗಿದ್ದು, ಅಮೆರಿಕ ಹಾಗೂ ಕೆನಡಾ ದ್ವಿಪೌರತ್ವ ಹೊಂದಿದ್ದಾಗಿಯೂ ಅಮೆರಿಕ ಹೇಳಿತ್ತು.
ಅಪಹರಣ ಹಾಗೂ ಸುಲಿಗೆ ಆರೋಪಗಳಡಿ, ಯಾದವ್ ಅವರನ್ನು ದೆಹಲಿ ಪೊಲೀಸರು 2023ರ ಡಿಸೆಂಬರ್‌ನಲ್ಲಿ ಬಂಧಿಸಿದ್ದರು.
ಇನ್ನೊಂದೆಡೆ, ಪನ್ನೂ ಹತ್ಯೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರನ್ನು 2023ರಲ್ಲಿ ಪ್ರಾಗ್‌ನಲ್ಲಿ ಬಂಧಿಸಲಾಗಿತ್ತು. ನಂತರ, ಅವರನ್ನು ಜೆಕ್ ಗಣರಾಜ್ಯವು ಅಮೆರಿಕಕ್ಕೆ ಹಸ್ತಾಂತರಿಸಿದೆ.