ಮುಳ್ಳೇರಿಯ: ಬೋವಿಕ್ಕಾನ ಸನಿಹದ ಇರಿಯಣ್ಣಿ, ತೀಯಡ್ಕದಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಸಾಕುನಾಯಿಗಳ ಮೇಲೆರಗುತ್ತಿದ್ದ ಚಿರತೆ ಈ ಬಾರಿ ಹಟ್ಟಿಯಲ್ಲಿ ಬಿಗಿಯಲಾದ ಕರುವಿನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಇಲ್ಲಿನ ತೀಯಡ್ಕ ನಿವಾಸಿ ಕುಞಂಬು ನಾಯರ್ ಎಂಬವರ ಮನೆ ಸನಿಹದ ಹಟ್ಟಿಯಲ್ಲಿ ಬಿಗಿಯಲಾಗಿದ್ದ ಕರು ಅರಚುವುನ್ನು ಕೇಳಿ ಮನೆಯವರು ಎಚ್ಚರಗೊಂಡು ಟಾರ್ಚ್ ಲೈಟಿನ ಬೆಳಕು ಹಾಯಿಸಿದಾಗ ಚಿರತೆ ಓಡಿಹೋಗುತ್ತಿರುವುದನ್ನು ಕಂಡಿದ್ದರು. ಚಿರತೆ ದಾಳಿಯಿಂದ ಕರುವಿನ ಕತ್ತಿನ ಭಾಗದಲ್ಲಿ ಗಂಭೀರ ಗಾಯಗಳುಂಟಾಗಿದೆ.
ಬೇಡಡ್ಕ ಪಂಚಾಯಿತಿಯ ಕೊಳತ್ತುರು, ಕಡುವನತ್ತೊಟ್ಟಿ, ಶಂಕರಂಕಾಡ್ ಪ್ರದೇಶದಲ್ಲೂ ಚಿರತೆ ಭೀತಿ ವ್ಯಾಪಿಸಿದ್ದು, ಶಂಕರಂಕಾಡ್ ನಿವಾಸಿ ಕೃಷ್ಣ ಕುಮಾರ್ ಎಂಬವರ ರಬ್ಬರ್ ತೋಟದಲ್ಲಿ ಚಿರತೆ ಕಂಡುಬಂದಿರುವ ಬಗ್ಗೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಮಾಹಿತಿ ನೀಡಿದ್ದರು. ಚಿರತೆ ಸಂಚಾರದಿಂದ ಬೆಳಗ್ಗೆ ರಬ್ಬರ್ ಟ್ಯಾಪಿಂಗ್ ನಡೆಸುವವರು ಹಾಗೂ ಇತರ ಕೆಲಸಗಳಿಗೆ ತೆರಳುವವರಿಗೆ ಹೆಚ್ಚಿನ ಆತಂಕ ಎದುರಾಗಿದೆ.