ನವದೆಹಲಿ: ಅಫ್ಗಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ದುಬೈನಲ್ಲಿ ಭೇಟಿ ಮಾಡಿದ್ದಾಗಿ ಭಾರತ ಬುಧವಾರ ಹೇಳಿದೆ.
ತಾಲಿಬಾನ್ ಸರ್ಕಾರದ ಸಚಿವರೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಾತುಕತೆ ನಡೆಸಿರುವುದನ್ನು ಇದೇ ಮೊದಲ ಬಾರಿಗೆ ಭಾರತ ಬಹಿರಂಗವಾಗಿ ಒಪ್ಪಿಕೊಂಡಿದೆ.
ಅಫ್ಗಾನಿಸ್ತಾನದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾಮಗ್ರಿಗಳ ಪೂರೈಕೆ ಸಂಬಂಧ ಈ ವೇಳೆ ಉಭಯ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗಾಗಿ ಚಬಹಾರ್ ಬಂದರು ಬಳಕೆ ಉತ್ತೇಜಿಸುವುದಕ್ಕೆ ಸಮ್ಮತಿಸಲಾಯಿತು. ದ್ವಿಪಕ್ಷೀಯ ಸಂಬಂಧ ವೃದ್ಧಿ ವಿಚಾರವಾಗಿಯೂ ಚರ್ಚಿಸಲಾಯಿತು ಎಂದು ತಿಳಿಸಿದೆ.