ನವದೆಹಲಿ: 'ನಾವು ಈಗ ಬಿಜೆಪಿ, ಆರ್‌ಎಸ್‌ಎಸ್ ಮತ್ತು ಭಾರತದ ವಿರುದ್ಧ ಹೋರಾಡುತ್ತಿದ್ದೇವೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ನ ಕರಾಳ ಮುಖವು ಆ ಪಕ್ಷದ ನಾಯಕನಿಂದಲೇ ಬಹಿರಂಗವಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಡ್ಡಾ, 'ರಾಹುಲ್ ಗಾಂಧಿ ಸುತ್ತಮುತ್ತ ನಗರ ನಕ್ಸಲರೇ ಇದ್ದು, ಇವರು ದೇಶವನ್ನು ಸದಾ ಅವಮಾನಿಸುವ, ಅಪಖ್ಯಾತಿ ಹರಡುವ ಕೆಲಸವನ್ನು ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ರಾಹುಲ್ ಅವರ ನಡೆ ಈ ರಹಸ್ಯದ ಬಗ್ಗೆ ಪದೇ ಪದೇ ಸಾರಿ ಹೇಳುತ್ತಿದೆ. ಭಾರತವನ್ನು ವಿಭಜಿಸುವ ಬಗ್ಗೆಯೇ ಅವರು ತಮ್ಮವರಿಗೆ ನಿರ್ದೇಶನ ನೀಡುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.
'ಮುಚ್ಚಿಡುವುದಕ್ಕೆ ಏನೂ ಇಲ್ಲ, ಕಾಂಗ್ರೆಸ್‌ನ ಕರಾಳ ಮುಖ ಪಕ್ಷದ ನಾಯಕನಿಂದಲೇ ಕಳಚಿಬಿದ್ದಿದೆ. ಈಗಾಗಲೇ ದೇಶಕ್ಕೆ ತಿಳಿದಿರುವುದನ್ನು ಸ್ಪಷ್ಟವಾಗಿ ಹೇಳಿದ್ದಕ್ಕಾಗಿ ನಾನು ರಾಹುಲ್ ಗಾಂಧಿಯವರನ್ನು ಅಭಿನಂದಿಸುತ್ತೇನೆ. ಭಾರತವನ್ನು ದುರ್ಬಲಗೊಳಿಸುವವರನ್ನು ಪ್ರೋತ್ಸಾಹಿಸಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ಅಧಿಕಾರದ ದುರಾಸೆಯಿಂದ ಜನರ ನಂಬಿಕೆಗೆ ದ್ರೋಹ ಮಾಡುತ್ತಿದ್ದಾರೆ. ಆದರೆ ಭಾರತದ ಜನರು ಬುದ್ಧಿವಂತರಾಗಿದ್ದಾರೆ, ಹೀಗಾಗಿ ರಾಹುಲ್ ಗಾಂಧಿ ಮತ್ತು ಅವರ ಕೊಳೆತ ಸಿದ್ಧಾಂತಗಳನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ನೂತನ ಪ್ರಧಾನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ್ದ ರಾಹುಲ್, 'ಬಿಜೆಪಿ ಮತ್ತು ಆರ್‌ಎಸ್‌ಎಸ್ ನಮ್ಮ ದೇಶದ ಪ್ರತಿಯೊಂದು ಸಂಸ್ಥೆಯನ್ನು ಹಿಡಿದಿಟ್ಟುಕೊಂಡಿದೆ. ನಾವು ಬಿಜಿಪಿ, ಆರ್‌ಎಸ್‌ಎಸ್ ಮತ್ತು ಭಾರತದ ವಿರುದ್ಧ ಹೋರಾಡಬೇಕು' ಎಂದಿದ್ದರು.